ಮೊದಲ ಸಹಸ್ರಮಾನದ ಮೊದಲ ವರ್ಷದಿಂದ ಕ್ರಿ.ಶ. 1750 ರವರೆಗೆ ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿತ್ತು ಮತ್ತು ಮೊದಲ 1000 ವರ್ಷಗಳಲ್ಲಿ ವಿಶ್ವದ ಜಿಡಿಪಿಯ 32 ಪ್ರತಿಶತದಷ್ಟು ಪಾಲನ್ನು ಮತ್ತು ಎರಡನೇ ಸಹಸ್ರಮಾನದಲ್ಲಿ 28 ರಿಂದ 24 ಪ್ರತಿಶತದಷ್ಟು ಪಾಲನ್ನು ಹೊಂದಿತ್ತು. ಹದಿನೆಂಟನೇ ಶತಮಾನದವರೆಗೆ ಭಾರತ ಮತ್ತು ಚೀನಾ ವಿಶ್ವದ ಎರಡು ಶ್ರೀಮಂತ ರಾಷ್ಟ್ರಗಳಾಗಿದ್ದವು. ಅಂದಿನ ಭೌಗೋಳಿಕ ಪರಿಸ್ಥಿತಿಗಳು ಭಾರತೀಯ ಉಪಖಂಡಕ್ಕೆ ಅನುಕೂಲಕರವಾಗಿದ್ದವು. ಇದು ವ್ಯಾಪಾರ ಜಾಲಗಳಲ್ಲಿ ಒಂದು ಪ್ರಮುಖ ಅಂಶವಾಗಿತ್ತು. 18 ನೇ ಶತಮಾನದವರೆಗೆ ಭಾರತ ಮತ್ತು ಚೀನಾ ವಿಶ್ವದ ಜಿಡಿಪಿಯ ಶೇಕಡಾ 50 ಕ್ಕಿಂತ ಹೆಚ್ಚಿನ ಪಾಲು ಹೊಂದಿದ್ದವು.
ಮಾನವ ಇತಿಹಾಸದ ಬಹುಪಾಲು ಅವಧಿಯಲ್ಲಿ ಚೀನಾ ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿದೆ. 13 ನೇ ಶತಮಾನದ ಉತ್ತರಾರ್ಧದಲ್ಲಿ ಮಾರ್ಕೊ ಪೋಲೊ ಯುವಾನ್ ರಾಜವಂಶಕ್ಕೆ ಭೇಟಿ ನೀಡಿದಾಗ, ಅದರ ಮಿಲಿಟರಿ ಶಕ್ತಿ, ಸಾಮಾಜಿಕ ರಚನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದರ ಅಗಾಧ ಸಂಪತ್ತಿನಿಂದ ಪ್ರಭಾವಿತನಾಗಿದ್ದ.
1987 ರಲ್ಲಿ ಎರಡೂ ದೇಶಗಳ ಜಿಡಿಪಿ (ನಾಮಿನಲ್) ಬಹುತೇಕ ಸಮಾನವಾಗಿತ್ತು; ಈಗ 2023 ರಲ್ಲಿ, ಚೀನಾದ ಜಿಡಿಪಿ ಭಾರತಕ್ಕಿಂತ 5.46 ಪಟ್ಟು ಹೆಚ್ಚಾಗಿದೆ. ಚೀನಾ 1998 ರಲ್ಲಿ 1 ಟ್ರಿಲಿಯನ್ ಡಾಲರ್ ಗಡಿ ದಾಟಿದರೆ, ಭಾರತವು ಒಂಬತ್ತು ವರ್ಷಗಳ ನಂತರ 2007 ರಲ್ಲಿ ಎಕ್ಸ್ಚೇಂಜ್ ಟು ರೇಟ್ ಆಧಾರದ ಮೇಲೆ ಈ ಗಡಿಯನ್ನು ದಾಟಿತು. ಎರಡೂ ದೇಶಗಳು 1990 ರವರೆಗೆ ತಲಾದಾಯ ಲೆಕ್ಕದಲ್ಲಿ ಬಹುತೇಕ ಸಮಾನವಾಗಿದ್ದವು. ಚೀನಾ ಮತ್ತು ಭಾರತದ ತಲಾ ಆದಾಯ ಶ್ರೇಯಾಂಕಗಳು 1990 ರಲ್ಲಿ ಕ್ರಮವಾಗಿ 63 ಮತ್ತು 147 ನೇ ಸ್ಥಾನದಲ್ಲಿದ್ದವು. ಆದರೆ ಈಗ ಈ ಎರಡೂ ದೇಶಗಳ ತಲಾ ಆದಾಯ ಕ್ರಮವಾಗಿ 75 ಮತ್ತು 139 ನೇ ಸ್ಥಾನದಲ್ಲಿವೆ.
ಡೆಂಗ್ ಕ್ಸಿಯಾವೊ ಪಿಂಗ್ ಅವರ ಆಳ್ವಿಕೆಯಲ್ಲಿ ಚೀನಾ ಉದಾರೀಕರಣಕ್ಕೆ ತೆರೆದುಕೊಳ್ಳಲು ಪ್ರಾರಂಭಿಸಿತು ಮತ್ತು ಇದೇ ಕಾರಣದಿಂದ ಅದರ ಆರ್ಥಿಕ ಬೆಳವಣಿಗೆ ಹೆಚ್ಚಾಗಲು ಪ್ರಾರಂಭಿಸಿತು. ಅಂದಿನಿಂದ ಸುಮಾರು ಎರಡು ದಶಕಗಳ ಕಾಲ ಚೀನಾ ಹಿಂತಿರುಗಿ ನೋಡಲೇ ಇಲ್ಲ. ಚೀನಾದ ಸುಮಾರು $ 5 ಟ್ರಿಲಿಯನ್ ಆರ್ಥಿಕತೆಯು ಜೂನ್ 2010 ಕ್ಕೆ ಕೊನೆಗೊಂಡ ಮೂರು ತಿಂಗಳಲ್ಲಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಯಿತು. ಚೀನಾದ ಪ್ರಮುಖ ವಲಯಗಳು ಮತ್ತು ಕೈಗಾರಿಕೆಗಳ ಚಾಲಿತ ಬೆಳವಣಿಗೆಯಲ್ಲಿ ಸೇವಾ ವಲಯ, ಉತ್ಪಾದನೆ ಮತ್ತು ತಂತ್ರಜ್ಞಾನ ಸೇರಿವೆ. ಚೀನಾ ವಿಶ್ವದ ಅತಿದೊಡ್ಡ ರಫ್ತುದಾರ ಮತ್ತು ಆಮದುದಾರರಲ್ಲಿ ಒಂದಾಗಿದೆ. ಚೀನಾ ಇತರ ದೇಶಗಳಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಅವುಗಳನ್ನು ಹೆಚ್ಚಿನ ಮೌಲ್ಯದ ಸರಕುಗಳಾಗಿ ಪರಿವರ್ತಿಸುತ್ತದೆ ಎಂಬುದು ಗಮನಾರ್ಹ.
ಎರಡೂ ದೇಶಗಳ ಆರ್ಥಿಕತೆಯ ಸುಧಾರಣೆಗಳಲ್ಲಿನ ವ್ಯತ್ಯಾಸಕ್ಕೆ ಕೆಲ ಕಾರಣಗಳನ್ನು ನೋಡಬಹುದು. ಅವು: (1) ಚೀನಾ ಕುಟುಂಬಕ್ಕೊಂದೇ ಮಗು ನೀತಿ ಮತ್ತು ಕುಟುಂಬ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿತು ಮತ್ತು ಆ ಮೂಲಕ ತನ್ನ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ, ಬಟ್ಟೆ ಮತ್ತು ಆಶ್ರಯವನ್ನು ಒದಗಿಸಿತು (2) ಚೀನಾ ತನ್ನ ಜನಸಂಖ್ಯೆಗೆ ಉತ್ತಮ ಶಿಕ್ಷಣ ನೀಡುತ್ತಿದೆ ಮತ್ತು ಆ ಮೂಲಕ ಮಾನವ ಸಂಪನ್ಮೂಲದ ಗುಣಮಟ್ಟವನ್ನು ಸುಧಾರಿಸಿದೆ. (3) ಚೀನಾ ಆರ್ಥಿಕತೆಯನ್ನು ವೇಗವಾಗಿ ಖಾಸಗೀಕರಣಗೊಳಿಸಿದೆ (4) ಚೀನಾದ ಕಾರ್ಮಿಕ ಮಾರುಕಟ್ಟೆ ಹೆಚ್ಚು ಆಳವಾದ ಸುಧಾರಣೆಗಳಿಗೆ ಒಳಗಾಯಿತು (5) ಚೀನಾದ ಆರ್ಥಿಕತೆಯನ್ನು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ವಿದೇಶಿ ನೇರ ವ್ಯಾಪಾರಕ್ಕೆ ತೆರೆಯಲಾಯಿತು.