ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಜನತೆ ಹೊಸ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಹೊಸ ವಾಹನ ಖರೀದಿಸಿ ರಸ್ತೆಗಿಳಿಯುವ ಮುನ್ನ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಅಗತ್ಯ. ಇದರಲ್ಲಿ ಮೊದಲನೆಯದು ವಾಹನ ವಿಮೆ ಮಾಡಿಸುವುದು. ಹೊಸ ದ್ವಿಚಕ್ರ ವಾಹನಗಳಿಗೆ ಐದು ವರ್ಷಗಳ ಥರ್ಡ್-ಪಾರ್ಟಿ ವಿಮೆ ಮತ್ತು ಕಾರುಗಳಿಗೆ ಮೂರು ವರ್ಷಗಳ ವಿಮೆ ಕಡ್ಡಾಯವಾಗಿದೆ. ಆದರೆ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುವಾಗ ಜನ ಕೆಲ ತಪ್ಪುಗಳನ್ನು ಮಾಡುತ್ತಾರೆ. ಹೀಗಾಗಿ ಈ ಬಗ್ಗೆ ಸರಿಯಾದ ತಿಳುವಳಿಕೆ ಇದ್ದಲ್ಲಿ ಸೂಕ್ತವಾದ ವಿಮಾ ಪಾಲಿಸಿ ಆಯ್ಕೆ ಮಾಡಬಹುದು.
ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ದಂಡ ಭರಿಸಬೇಕಾಗಬಹುದು. ವಿಮೆ ಇಲ್ಲದಿರುವಾಗ ಏನಾದರೂ ಅಪಘಾತ ಸಂಭವಿಸಿದರೆ ವಾಹನ ಮಾಲೀಕನೇ ಎಲ್ಲಾ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಆದ್ದರಿಂದ, ಯಾವುದೇ ಸಂದರ್ಭದಲ್ಲಿ, ನೀವು ಕನಿಷ್ಠ ಪಕ್ಷ ಥರ್ಡ್ ಪಾರ್ಟಿ ವಿಮೆ ಹೊಂದಿರದೆ ವಾಹನ ಚಲಾಯಿಸಲೇಬೇಡಿ. ಆದರೆ ಕಾರು ಮತ್ತು ಬೈಕ್‌ಗಳ ಮಾರಾಟಗಾರರು ಅವರು ಒಪ್ಪಂದ ಮಾಡಿಕೊಂಡಿರುವ ವಿಮಾ ಕಂಪನಿಗಳ ಪಾಲಿಸಿಯನ್ನೇ ಕೊಳ್ಳುವಂತೆ ನಿಮ್ಮ ಮೇಲೆ ಪ್ರಭಾವ ಬೀರಬಹುದು ಎಂಬುದು ಗೊತ್ತಿರಲಿ.
ಅಪಘಾತ ಅಥವಾ ಕಳ್ಳತನದ ಸಂದರ್ಭದಲ್ಲಿ ಸಮಗ್ರ ವಿಮಾ ಪಾಲಿಸಿ ನಿಮಗೆ ಪರಿಹಾರ ಒದಗಿಸುತ್ತದೆ, ಇಲ್ಲದಿದ್ದರೆ ನೀವು ನಷ್ಟಕ್ಕೊಳಗಾಗಬಹುದು. ಹೆಚ್ಚಿನ ಜನರು ಸಮಗ್ರ ಕಾರು ವಿಮೆಯನ್ನು ಸಮಯಕ್ಕೆ ಸರಿಯಾಗಿ ನವೀಕರಿಸುವುದಿಲ್ಲ, ಥರ್ಡ್ ಪಾರ್ಟಿ ವಿಮಾ ಪಾಲಿಸಿ ಸಾಕೆಂದು ಭಾವಿಸುತ್ತಾರೆ. ಆದರೆ ಇದು ಸರಿಯಲ್ಲ. ಕಾರಿಗೆ ಸಣ್ಣಪುಟ್ಟ ಹಾನಿಯಾದರೂ ದುರಸ್ತಿಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ವಿಮಾ ಪಾಲಿಸಿ ಇದ್ದಲ್ಲಿ ನಿಮ್ಮ ಜೇಬಿಗೆ ಯಾವುದೇ ಹಣಕಾಸಿನ ಒತ್ತಡ ಇರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.