ನವದೆಹಲಿ:ಟಾಟಾ ಗ್ರೂಪ್ ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ತನ್ನದೇ ಆದ ಕಂಪ್ಯೂಟರ್ ಚಿಪ್‌ಸೆಟ್‌ಗಳನ್ನು ತಯಾರಿಸಲು ಪ್ರಯತ್ನಿಸಲಿದೆ ಎಂದು ಕಂಪನಿ ತಿಳಿಸಿದೆ. ಕಂಪನಿ ಈಗಾಗಲೇ ಚಿಪ್ ತಯಾರಿಸುತ್ತಿರುವ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಅನೇಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ತಿಳಿಸಿರುವುದಾಗಿ ಮಾಧ್ಯಮವೊಂದರ ಹೊಸ ವರದಿ ಹೇಳಿದೆ.
ಕಂಪನಿಯು ಟಾಟಾ ಎಲೆಕ್ಟ್ರಾನಿಕ್ಸ್ ಅಂಗಸಂಸ್ಥೆಯನ್ನು ಸ್ಥಾಪಿಸಲಿದ್ದು, ಇದರ ಅಡಿ ಸೆಮಿಕಂಡಕ್ಟರ್ ಅಸೆಂಬ್ಲಿ ಟೆಸ್ಟಿಂಗ್ ಉದ್ಯಮ ಸ್ಥಾಪಿಸಲಿದೆ. ಟಾಟಾ ಈ ವರ್ಷದ ಜೂನ್‌ನಲ್ಲಿ ಟೋಕಿಯೊ ಮೂಲದ ರೆನೆಸಾಸ್ ಎಲೆಕ್ಟ್ರಾನಿಕ್ಸ್‌ನೊಂದಿಗೆ ಪಾಲುದಾರಿಕೆಯನ್ನು ಈಗಾಗಲೇ ಘೋಷಿಸಿದೆ. ಇದು ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಆಧರಿಸಿದೆ. ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಕಂಪನಿಯು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಒಟ್ಟಾರೆಯಾಗಿ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿನ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವ ಸಮಯದಲ್ಲಿಯೇ ಟಾಟಾ ಕಂಪನಿಯ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ. 2025-26 ರ ವೇಳೆಗೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಉತ್ಪಾದನೆಯನ್ನು 300 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಪ್ರಧಾನಿ ಹೊಂದಿದ್ದಾರೆ ಎಂದು ಕಳೆದ ತಿಂಗಳು ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನದ ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದರು.