ನವದೆಹಲಿ: ಆಗಸ್ಟ್ ತಿಂಗಳಲ್ಲಿ ಮುಂಗಾರು ದೀರ್ಘಾವಧಿಯ ಸರಾಸರಿಗಿಂತ ಗಣನೀಯವಾಗಿ ಕಡಿಮೆಯಾಗಿದ್ದು, ಶೇ 30ರಷ್ಟು ಕೊರತೆಯನ್ನು ದಾಖಲಿಸಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ವರದಿಯಲ್ಲಿ ತಿಳಿಸಿದೆ. ದಕ್ಷಿಣ ಭಾರತದ ಪ್ರದೇಶಗಳಲ್ಲಿ ಗಮನಾರ್ಹವಾಗಿ ಶುಷ್ಕ ಪರಿಸ್ಥಿತಿ ಕಾಣಿಸಿಕೊಂಡಿದೆ. ಜುಲೈನಲ್ಲಿ ಶೇಕಡಾ 5 ರಷ್ಟು ಹೆಚ್ಚುವರಿ ಮುಂಗಾರು ಮಳೆಯಾಗಿತ್ತು. ಆದರೆ, ಆಗಸ್ಟ್ನಲ್ಲಿ ಮುಂಗಾರು ತೀವ್ರ ಇಳಿಕೆಯಾಯಿತು. ಆಗಸ್ಟ್ 20 ರ ವೇಳೆಗೆ ಒಟ್ಟಾರೆ ಶೇಕಡಾ 7 ರಷ್ಟು ಮುಂಗಾರು ಮಳೆ ಕೊರತೆಯಾಗಿದೆ ಎಂದು ವರದಿ ತಿಳಿಸಿದೆ.
ವಾಯುವ್ಯದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 6 ರಷ್ಟು ಹೆಚ್ಚು, ಮಧ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 2 ರಷ್ಟು ಕಡಿಮೆ, ದಕ್ಷಿಣ ಪರ್ಯಾಯ ದ್ವೀಪ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಶೇಕಡಾ 13 ಕಡಿಮೆ ಮತ್ತು ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಶೇಕಡಾ 20ರಷ್ಟು ಕಡಿಮೆ ಮಳೆಯಾಗಿದೆ. ಕಡಿಮೆ ಮಳೆ ಹಾಗೂ ಹೆಚ್ಚಿನ ಬಿಸಿಲಿಗೆ ಕಾರಣವಾಗುವ ಎಲ್ ನಿನೊ ಅಲೆಯ ಪರಿಣಾಮ ಆರಂಭದಲ್ಲಿ ತುಂಬಾ ಕಡಿಮೆಯಾಗಿತ್ತು. ನಂತರ ಇದು ಮಧ್ಯಮ ಗತಿಗೆ ತಿರುಗಿತ್ತು. ಪ್ರಸ್ತುತ ಅಮೆರಿಕದ ಹವಾಮಾನ ಮುನ್ಸೂಚನಾ ಇಲಾಖೆಗಳ ಪ್ರಕಾರ ಈ ವರ್ಷಾಂತ್ಯಕ್ಕೆ ಎಲ್ ನಿನೊ ಶೇ 66 ರಷ್ಟು ಪ್ರಬಲವಾಗಲಿದೆ.
ಆಗಸ್ಟ್ 18 ರ ವೇಳೆಗೆ ಖಾರಿಫ್ ಹಂಗಾಮಿನ ಬಿತ್ತನೆ ಕಳೆದ ವರ್ಷಕ್ಕಿಂತ ಶೇಕಡಾ 0.1 ರಷ್ಟು ಹೆಚ್ಚಾಗಿದೆ. ಭತ್ತದ ಕೃಷಿಯ ಪ್ರದೇಶವು ಕಳೆದ ವರ್ಷಕ್ಕಿಂತ ಈಗ ಶೇಕಡಾ 4.3 ರಷ್ಟು ಹೆಚ್ಚಾಗಿದೆ. ಆದರೆ ಬೇಳೆಕಾಳು ಬಿತ್ತನೆ ಪ್ರದೇಶವು ಕಳೆದ ವರ್ಷಕ್ಕಿಂತ ಶೇಕಡಾ 9.2 ರಷ್ಟು ಕಡಿಮೆಯಾಗಿದೆ. ಸೆಣಬು, ಹತ್ತಿ ಮತ್ತು ಎಣ್ಣೆಕಾಳುಗಳ ಉತ್ಪಾದನೆಯೂ ಕಡಿಮೆಯಾಗಿದೆ. ಒರಟು ಧಾನ್ಯಗಳ ಉತ್ಪಾದನೆ ವರ್ಷದಿಂದ ವರ್ಷಕ್ಕೆ 1.6 ಪ್ರತಿಶತ ಮತ್ತು ಕಬ್ಬು ಉತ್ಪಾದನೆ 1.3 ಪ್ರತಿಶತ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.