ಮುಂಬೈ : ಅಮೆಜಾನ್ ಮತ್ತು ಬ್ಲೂ ಓರಿಜಿನ್ ಕಂಪನಿಗಳ ಸಂಸ್ಥಾಪಕ ಜೆಫ್ ಬೆಜೋಸ್ ಇತ್ತೀಚೆಗೆ ತಮ್ಮ ಗರ್ಲ್ ಫ್ರೆಂಡ್ ಲಾರೆನ್ ಸ್ಯಾಂಚೆಜ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. 500 ಮಿಲಿಯನ್ ಡಾಲರ್ ಮೌಲ್ಯದ ತಮ್ಮ ಸುಪರ್ ಯಾಚ್ (ದೋಣಿ)ಯಲ್ಲಿ ಬೆಜೋಸ್ ಮತ್ತು ಲಾರೆನ್ ವಿರಾಮದ ಕ್ಷಣಗಳನ್ನು ಆನಂದಿಸುತ್ತಿರುವ ಚಿತ್ರಗಳು ವೈರಲ್ ಆಗಿವೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬೆಜೋಸ್ ತಮ್ಮ ವೈಭವೋಪೇತ ಜೀವನ ಹಾಗೂ ಗರ್ಲ್ಫ್ರೆಂಡ್ಗಳ ವಿಚಾರದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೊಮ್ಮೆ ಲಾರೆನ್ ಅವರೊಂದಿಗೆ ಮೋಜಿನ ಕಾಲ ಕಳೆಯುತ್ತಿರುವ ಬೆಜೋಸ್ ಸುದ್ದಿಯಾಗಿದ್ದಾರೆ.
ಲಾರೆನ್ ಸ್ಯಾಂಚೆಜ್ ಓರ್ವ ಎಂಟರ್ಟೇನ್ಮೆಂಟ್ ರಿಪೋರ್ಟರ್ ಮತ್ತು ನ್ಯೂಜ್ ಆ್ಯಂಕರ್ ಆಗಿದ್ದಾರೆ. ಅವರು KCOP-TV ಯಲ್ಲಿ ಡೆಕ್ ಅಸಿಸ್ಟಂಟ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ನಂತರ ಅವರು ಫಾಕ್ಸ್ ಸ್ಪೋರ್ಟ್ಸ್ ನೆಟ್, ಯುಪಿಎನ್ 13 ನ್ಯೂಸ್ ಮತ್ತು ಕೆಟಿಟಿವಿ ಯಂಥ ಪ್ರಖ್ಯಾತ ಮಾಧ್ಯಮ ಸಂಸ್ಥೆಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ. 2010ರಲ್ಲಿ ಇವರು ಪೀಪುಲ್ ಮ್ಯಾಗಜೀನ್ ನ 50 ಮೋಸ್ಟ್ ಬ್ಯೂಟಿಫುಲ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
ಇವರು 2016 ರಲ್ಲಿ ಬ್ಲ್ಯಾಕ್ ಆಪ್ಸ್ ಏವಿಯೇಶನ್ ಹೆಸರಿನ ಕಂಪನಿಯನ್ನು ಆರಂಭಿಸಿದ್ದರು. ಇದು ಮಹಿಳಾ ಒಡೆತನದ ಪ್ರಥಮ ವೈಮಾನಿಕ ಚಲನಚಿತ್ರ ನಿರ್ಮಾಣ ಮತ್ತು ಪ್ರೊಡಕ್ಷನ್ ಕಂಪನಿಯಾಗಿದೆ. ಇವರು ಓರ್ವ ಪೈಲಟ್ ಕೂಡ ಹೌದು. ಜೆಫ್ ಬೆಜೋಸ್ ಅವರೊಂದಿಗೆ ಸಂಬಂಧ ಹೊಂದುವ ಮುನ್ನವೂ ಸ್ಯಾಂಚೆಜ್ ಪ್ರಖ್ಯಾತಿಯನ್ನು ಗಳಿಸಿದ್ದರು. ಆದರೆ ಈಗ ಜನ ಅವರನ್ನು ಜೆಫ್ ಬೆಜೋಸ್ ಅವರ ಗರ್ಲ್ ಫ್ರೆಂಡ್ ಅಂತಾನೇ ಹೆಚ್ಚಾಗಿ ಗುರುತಿಸುತ್ತಾರೆ. ಲಾರೆನ್ ಸ್ಯಾಂಚೆಜ್ 1969ರ ಡಿಸೆಂಬರ್ 19 ರಂದು ಜನಿಸಿದ್ದರು. ಈಗ ಅವರಿಗೆ 53 ವರ್ಷ ವಯಸ್ಸು.