ನವದೆಹಲಿ:ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಎಂಟು ನಗರಗಳಲ್ಲಿ ವಸತಿ ಬೇಡಿಕೆ ಹೆಚ್ಚಾಗಿದೆ. ಈ ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಈ ಪಟ್ಟಣಗಳಲ್ಲಿ ವಸತಿ ಬೆಲೆಗಳು (Housing Prices) ವಾರ್ಷಿಕವಾಗಿ ಸರಾಸರಿ ಶೇ.10ರಷ್ಟು ಏರಿಕೆಯಾಗಿದೆ. ಹೀಗೆಂದು ಕ್ರೆಡಾಯ್ (CREDAI), ಕಾಲಿಯರ್ಸ್ ಮತ್ತು ಲಿಯಾಸ್ ಫೊರಾಸ್ (Colliers and Liases Foras) ಜಂಟಿ ವರದಿ ತಿಳಿಸಿದೆ.
ಎಲ್ಲ ಎಂಟು ಪ್ರಮುಖ ನಗರಗಳ ವಸತಿ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಹೈದರಾಬಾದ್‌ನಲ್ಲಿ ವರ್ಷದಿಂದ ವರ್ಷಕ್ಕೆ (YoY) ಅತಿಹೆಚ್ಚು ಎಂದರೆ, ಶೇ.19ರಷ್ಟು ಏರಿಕೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನ ವಸತಿ ಬೆಲೆಗಳಲ್ಲಿ ವಾರ್ಷಿಕ ಆಧಾರದ ಮೇಲೆ ಶೇ.18ರಷ್ಟು ಹೆಚ್ಚಳವಾಗಿದೆ. 2023ರಲ್ಲಿ ಮನೆ ಖರೀದಿದಾರರ ಭಾವನೆಗಳು ಸಾಕಷ್ಟು ಸಕಾರಾತ್ಮಕವಾಗಿವೆ. ಇದು ವಸತಿ ನೋಂದಣಿಗಳ ಪರಿಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಪರೋಕ್ಷವಾಗಿ ಹೆಚ್ಚುತ್ತಿರುವ ವಸತಿ ಬೆಲೆಗಳ ಮೇಲೆ ಕ್ಯಾಸ್ಕೇಡಿಂಗ್ ಪ್ರಭಾವವನ್ನು ಹೊಂದಿದೆ ಎಂದು ಕ್ರೆಡಾಯ್ ಅಧ್ಯಕ್ಷ ಬೊಮನ್ ಇರಾನಿ ತಿಳಿಸಿದ್ದಾರೆ.
ಯಾವ ನಗರದಲ್ಲಿ ಪ್ರತಿ ಚದರಡಿಗೆ ಎಷ್ಟು ಸಾವಿರ ರೂ.?: ಅಹಮದಾಬಾದ್‌ನಲ್ಲಿ ವಸತಿ ಬೆಲೆಗಳು ಪ್ರತಿ ಚದರಡಿಗೆ (ಕಾರ್ಪೆಟ್ ಏರಿಯಾ) 9ರಷ್ಟು ಏರಿಕೆಯಾಗಿ 6,613 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ ವಸತಿ ದರಗಳು ಪ್ರತಿ ಚದರಡಿಗೆ 9,471 ರೂ. ಆಗಿದ್ದು, ಶೇ.18ರಷ್ಟು ಹೆಚ್ಚಳವಾಗಿದೆ. ಚೆನ್ನೈನಲ್ಲಿ ಪ್ರತಿ ಚದರಡಿಗೆ ಶೇ.7ರಷ್ಟು ಏರಿಕೆ ಕಂಡಿದ್ದು, 7,712 ರೂ.ಗೆ ತಲುಲಿದೆ.
ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್‌ನಲ್ಲಿ ವಸತಿ ಬೆಲೆಗಳು ಪ್ರತಿ ಚದರಡಿಗೆ ಪ್ರತಿಶತ 12ರಷ್ಟು ಏರಿಕೆಯೊಂದಿಗೆ 8,655 ರೂ. ನಿಗದಿಯಾಗಿದೆ. ಹೈದರಾಬಾದ್‌ನಲ್ಲಿ ವಸತಿ ಬೆಲೆಗಳ ಸರಾಸರಿಯಲ್ಲಿ ಅತ್ಯಧಿಕ ದುಬಾರಿಯಾಗಿದ್ದು, ಇಲ್ಲಿ ಶೇ.19ರಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ಪ್ರತಿ ಚದರಡಿಗೆ 11,040 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ ವಸತಿ ಬೆಲೆಗಳು ಪ್ರತಿ ಚದರಡಿಗೆ ಶೇ.12ರಷ್ಟು ಹೆಚ್ಚಳದೊಂದಿಗೆ 7,406 ರೂ.ಗೆ ತಲುಪಿದೆ.