ಕಾಶಿ ವಿಶ್ವನಾಥ ಕಾರಿಡಾರ್: ವಾರಣಾಸಿಯಲ್ಲಿ ಹೋಟೆಲ್, ಪಿಜಿ ಉದ್ಯಮ ಅಭಿವೃದ್ಧಿ ವಾರಣಾಸಿ(ಉತ್ತರ ಪ್ರದೇಶ) : ಕೇಂದ್ರ ಸರ್ಕಾರ ದೇಶಾದ್ಯಂತ ಮಠಗಳು ಹಾಗೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ದೇಶದ ಪ್ರವಾಸೋದ್ಯಮದಲ್ಲಿ ಹೊಸ ಕ್ರಾಂತಿಯಾಗುತ್ತಿದೆ. ದೇವಾಲಯಗಳೊಂದಿಗೆ ಅನೇಕ ಪ್ರವಾಸಿ ಸ್ಥಳಗಳ ಅಭಿವೃದ್ಧಿಯ ಕೆಲಸಗಳೂ ನಡೆಯುತ್ತಿವೆ. ಕಾಶಿ ವಿಶ್ವನಾಥ ಕಾರಿಡಾರ್, ಶ್ರೀರಾಮ ಮಂದಿರ, ಮಹಾಕಾಳ ಲೋಕ ಇತ್ಯಾದಿ ಪ್ರಸಿದ್ಧ ಧಾರ್ಮಿಕ ತಾಣಗಳೇ ಇದಕ್ಕೆ ಉದಾಹರಣೆ. ಇವುಗಳ ನವೀಕರಣದ ನಂತರ ದೇಶಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚುತ್ತಿದೆ.
ಅದರಲ್ಲೂ ವಿಶ್ವನಾಥನ ನಗರ ಕಾಶಿ ಪ್ರವಾಸಿ ಮಾದರಿ ನಗರವಾಗಿ ರೂಪುಗೊಳ್ಳುತ್ತಿದೆ. ದೇಶ ಮಾತ್ರವಲ್ಲದೆ ವಿದೇಶಿಗರನ್ನೂ ತನ್ನತ್ತ ಸೆಳೆಯುತ್ತಿದೆ. ಪ್ರವಾಸಿ ಕೇಂದ್ರಗಳ ಬೆಳವಣಿಗೆಯಿಂದ ಇಲ್ಲಿನ ಹಲವು ಉದ್ಯಮಗಳು ಅಭಿವೃದ್ಧಿ ಕಾಣುತ್ತಿವೆ. ಹೋಟೆಲ್, ರೆಸ್ಟೋರೆಂಟ್ಗಳು ಆದಾಯ ವೃದ್ಧಿಸಿಕೊಳ್ಳುತ್ತಿವೆ.
ವಾರಣಾಸಿಯಲ್ಲಿ ಹೋಟೆಲ್, ಪಿಜಿ ಉದ್ಯಮಕ್ಕೆ ಬಲ 2,800 ಕ್ಕೇರಿದ ವಸತಿ ಗೃಹಗಳು: ವಾರಣಾಸಿಯ ಪ್ರಸಿದ್ಧ ಘಾಟ್‌ಗಳ ಹತ್ತಿರವೇ ವಾಸಿಸುವ ಜನರು ಹೋಟೆಲ್ ಹಾಗೂ ಪಿಜಿ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದು ಘಾಟ್‌ಗಳ ಚಿತ್ರಣವನ್ನು ಬದಲಲಿಸಿದೆ. ಅಷ್ಟೇ ಅಲ್ಲ, ಆದಾಯವನ್ನೂ ಹೆಚ್ಚಿಸುತ್ತಿದೆ. ಕಾಶಿಯ ಅಸ್ಸಿ ಮತ್ತು ದಶಾಶ್ವಮೇಧ ಘಾಟ್‌ಗಳಲ್ಲೀಗ ಪಿಜಿ ಮತ್ತು ಹೋಟೆಲ್‌ಗಳ ಸಂಖ್ಯೆ 2,800ಕ್ಕೇರಿವೆ.
ಈ ಬಗ್ಗೆ ಮಾಹಿತಿ ನೀಡುವ ಟೂರಿಸಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ರಾಹುಲ್ ಮೆಹ್ತಾ, "ಬಾಬಾ ವಿಶ್ವನಾಥ್ ಕಾರಿಡಾರ್ ನಿರ್ಮಾಣದ ನಂತರ ಬನಾರಸ್ಗೆ(ವಾರಣಾಸಿ) ಬರುವ ಯಾತ್ರಾರ್ಥಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಯಾತ್ರಿಕರು ಮತ್ತು ಪ್ರವಾಸಿಗರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಪ್ರವಾಸಿಗರು ಹೋಟೆಲ್ ಮತ್ತು ಪೇಯಿಂಗ್ ಗೆಸ್ಟ್‌ಗಳಲ್ಲಿ ಉಳಿಯಲು ಬಯಸುತ್ತಾರೆ. ಇಲ್ಲಿನ ಸಂಸ್ಕೃತಿ ಅರಿಯಲು ಇದೊಂದು ಉತ್ತಮ ಮಾಧ್ಯಮ" ಎನ್ನುತ್ತಾರೆ.
ವಾರಣಾಸಿಯಲ್ಲಿ ಹೋಟೆಲ್, ಪಿಜಿ ಉದ್ಯಮಕ್ಕೆ ಬಲ "ಪೇಯಿಂಗ್ ಗೆಸ್ಟ್‌ಗಳಲ್ಲಿ ಮನೆಯ ಯಜಮಾನನೂ ಅಲ್ಲೇ ವಾಸಿಸುತ್ತಾನೆ. ಇದರಿಂದಾಗಿ ಅಲ್ಲಿಗೆ ಬಂದು ತಂಗುವ ಪ್ರವಾಸಿಗರಿಗೆ ಇಲ್ಲಿನ ಜನರ ಜೀವನ ಪರಿಸ್ಥಿತಿ, ಆಹಾರ, ಪಾನೀಯಗಳ ಬಗ್ಗೆ ಅರಿವಾಗುತ್ತದೆ. ವಿಶೇಷವಾಗಿ ವಿದೇಶಿ ಪ್ರವಾಸಿಗರು, ಅವರ ಮೊದಲ ಆದ್ಯತೆ ಪೇಯಿಂಗ್ ಗೆಸ್ಟ್. ಪ್ರವಾಸಿಗರಾಗಿ ಬರುವ ಅವರಿಲ್ಲಿ ಬಂದು ನಮ್ಮನ್ನು, ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತಾರೆ" ಎಂದರು.
ವಾರಣಾಸಿಯಾದ್ಯಂತ ಪಿಜಿ ಬುಕ್ಕಿಂಗ್ ಹೆಚ್ಚಳ:ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಕುಮಾರ್ ರಾವತ್ ಮಾತನಾಡಿ, "ಇಂದಿನ ದಿನದಲ್ಲಿ ಪಿಜಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದು ಸಾರನಾಥವಾಗಿರಲಿ, ಬಾಬಾ ವಿಶ್ವನಾಥನ ಬಳಿಯಿರುವ ಸ್ಥಳವಾಗಿರಲಿ ಅಥವಾ ಕಾಲಭೈರವನ ದೇವಾಲಯದ ಸಮೀಪವಿರುವ ಸ್ಥಳವಾಗಿರಲಿ, ಬನಾರಸ್‌ನಾದ್ಯಂತ ಹೆಚ್ಚು ಹೆಚ್ಚು ಪ್ರವಾಸಿಗರು ಪಿಜಿಗಳನ್ನು ಬುಕ್ ಮಾಡುತ್ತಿದ್ದಾರೆ. ಇಲ್ಲಿ ಕಾರಿಡಾರ್ ನಿರ್ಮಾಣದಿಂದ ಜನರಿಗೆ ಉತ್ತಮ ಉದ್ಯೋಗವೂ ಸಿಕ್ಕಿದೆ."
"ಕಾಶಿ ವಿಶ್ವನಾಥ ಧಾಮ ರಚನೆಯಾದ ನಂತರ ಸುತ್ತಮುತ್ತಲಿನ ಪ್ರದೇಶಗಳೂ ಅಭಿವೃದ್ಧಿ ಕಂಡಿವೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಪಿಜಿಯಲ್ಲಿ ತಂಗುವ ಪ್ರವಾಸಿಗರು ಘಾಟ್‌ಗಳ ಸುತ್ತಲಿನ ಪ್ರದೇಶವನ್ನೇ ಹೆಚ್ಚು ಇಷ್ಟಪಡುತ್ತಾರೆ. ಮುಂಜಾವಿನ ಬನಾರಸ್, ಘಾಟ್‌ಗಳ ಮೇಲೆ ನಡೆಯುವುದು, ಸುತ್ತಮುತ್ತಲಿನ ದೇವಾಲಯಗಳಿಗೆ ಭೇಟಿ ನೀಡುವುದು ಇವೆಲ್ಲವೂ ಪ್ರವಾಸಿಗರಿಗೆ ಅಚ್ಚುಮೆಚ್ಚು. ಹಾಗಾಗಿ ಇಲ್ಲಿನ ಸ್ಥಳಗಳಲ್ಲಿ ಪಿಜಿಗಾಗಿ ಬುಕ್ ಮಾಡುವವರ ಸಂಖ್ಯೆ 3000 ಕ್ಕಿಂತಲೂ ಅಧಿಕವಾಗಿದೆ. ವಾರಾಂತ್ಯದಲ್ಲಿ ಕೊಠಡಿಗಳು ಸಿಗುವುದು ಕೂಡ ಕಷ್ಟವಾಗಿದೆ."
"ಪಿಜಿ ಪರಿಕಲ್ಪನೆಯನ್ನು ಕಾಶಿಯ ಜನರು ಉತ್ತಮ ಉದ್ಯಮವಾಗಿ ನೋಡುತ್ತಿದ್ದಾರೆ. ಹೋಟೆಲ್‌ಗಳ ಕೊರತೆಯಿದ್ದರೆ ಅಥವಾ ಹೋಟೆಲ್‌ಗಳು ದುಬಾರಿಯಾಗುತ್ತಿದ್ದರೆ, ಪ್ರವಾಸಿಗರು ಪಿಜಿಗಳಲ್ಲಿ ಉಳಿಯಲು ತುಂಬಾ ಇಷ್ಟಪಡುತ್ತಾರೆ. ಇದರ ಟ್ರೆಂಡ್ ಕೂಡ ಹೆಚ್ಚುತ್ತಿದೆ. ಜನರು ತಮ್ಮ ನಿವಾಸದ ಮೂರರಿಂದ ಐದು ಕೊಠಡಿಗಳನ್ನು ಪಿಜಿಯಾಗಿ ಪರಿವರ್ತಿಸಬಹುದು. ಕಾಶಿಯ ಈ ಪರಿಕಲ್ಪನೆಯನ್ನು ಇತರೆ ನಗರಗಳೂ ಅಳವಡಿಸಿಕೊಳ್ಳಬೇಕು" ಎನ್ನುತ್ತಾರೆ ರಾಜೇಂದ್ರ ಕುಮಾರ್ ರಾವತ್.
"ವಾರಣಾಸಿಯ ಘಾಟ್‌ಗಳ ಮೇಲೆ ವಾಸಿಸುವ ಜನರು ಹೋಟೆಲ್ ವ್ಯಾಪಾರವನ್ನು ಪ್ರಾರಂಭಿಸಿದರೆ, ವಾರಣಾಸಿಯ ಜನರು ಪಿಜಿಗಳನ್ನು ಆರಂಭಿಸಿದರು. ವಾರಣಾಸಿಯಲ್ಲಿ ಪಿಜಿ ಆರಂಭಿಸಿದ ಜನರ ಆದಾಯ ಹಲವು ಪಟ್ಟು ಹೆಚ್ಚಾಗಿದೆ. ದೇವಸ್ಥಾನಗಳ ಸುತ್ತವೂ ಪಿಜಿಗಳನ್ನು ನಿರ್ಮಿಸಲಾಗುತ್ತಿದೆ. ವಿಶ್ವನಾಥ್ ಕಾರಿಡಾರ್ ನಿರ್ಮಾಣವಾದ ನಂತರ ಜನರು ಬೇಗನೆ ಉದ್ಯಮವನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಕಂಡುಕೊಂಡರು. ಈ ಪಿಜಿ ಸಂಸ್ಕೃತಿಯನ್ನು ಬೇರೆ ಪ್ರವಾಸಿ ತಾಣಗಳಲ್ಲಿ ಅಳವಡಿಸಿಕೊಳ್ಳಬಹುದು. ಮಠ, ಮಂದಿರಗಳ ಬಳಿ ಇರುವ ಮನೆಗಳನ್ನು ಪೇಯಿಂಗ್ ಗೆಸ್ಟ್ ಹೌಸ್ ಆಗಿ ಪರಿವರ್ತಿಸಬಹುದು".
"ಅವುಗಳ ಸುತ್ತ ರೆಸ್ಟೋರೆಂಟ್ಗಳ ಸೌಲಭ್ಯ ಕಲ್ಪಿಸಬಹುದು. ನಿಮ್ಮ ಮನೆ ಪ್ರವಾಸಿ ಪ್ರದೇಶದ ಸಮೀಪದಲ್ಲಿದ್ದರೆ, ನೀವು ಅದನ್ನು ಪಿಜಿ ಅಥವಾ ಪೇಯಿಂಗ್ ಗೆಸ್ಟ್ ಹೌಸ್ ಆಗಿ ಪರಿವರ್ತಿಸಬಹುದು. ಪ್ರವಾಸೋದ್ಯಮ ವಲಯದಲ್ಲಿ ಪಿಜಿಗೆ ಸಾಕಷ್ಟು ಬೇಡಿಕೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಕಾಶಿ ಜನರ ಮಾದರಿಯಲ್ಲಿ ಪಿಜಿ ವ್ಯವಸ್ಥೆ ಆರಂಭಿಸಬಹುದು. ಸಾಧ್ಯವಾದರೆ, ಹೋಟೆಲ್ ನಿರ್ಮಿಸಿ ಹೆಚ್ಚಿನ ಹಣವನ್ನು ಗಳಿಸಬಹುದು" ಎನ್ನುತ್ತಾರೆ ರಾಜೇಂದ್ರ ಕುಮಾರ್ ರಾವತ್.
ಇದನ್ನೂ ಓದಿ:ಕತ್ತೆ ಸಾಕಣೆ ಮಾಡಿ ಯಶಸ್ವಿಯಾದ ವ್ಯಾಪಾರಿ; ಇವರ ತಿಂಗಳ ಆದಾಯ ಕೇಳಿದರೆ ನೀವು ಅಚ್ಚರಿ ಪಡೋದು ಗ್ಯಾರಂಟಿ!