ಹೈದರಾಬಾದ್: ಕಳೆದೆರಡು ವರ್ಷಗಳಿಂದ ಅನಿಶ್ಚಿತ ಆರ್ಥಿಕ ಪರಿಸ್ಥಿತಿ ಎಲ್ಲೆಡೆ ಕಂಡು ಬಂದಿತ್ತು. ಕೊರೊನಾ ಬಿಕ್ಕಟ್ಟು ಹಾಗೂ ಪ್ರಸ್ತುತ ನಡೆದಿರುವ ಅಂತಾರಾಷ್ಟ್ರೀಯ ಬಿಕ್ಕಟ್ಟುಗಳು ಸೇರಿದಂತೆ ಇನ್ನೂ ಕೆಲವಾರು ಕಾರಣಗಳಿಂದ ಆರ್ಥಿಕತೆ ಡೋಲಾಯಮಾನವಾಗಿತ್ತು. ಈ ಅನಿಶ್ಚಿತತೆಯು ಬಂಡವಾಳ ಹೂಡಿಕೆದಾರರಿಗೆ ಆತಂಕ ಉಂಟು ಮಾಡಿರುವುದು ಸಹಜ. ಇದರ ಮಧ್ಯೆ ಸ್ಟಾಕ್ ಮಾರುಕಟ್ಟೆಗಳು ಸಿಕ್ಕಾಪಟ್ಟೆ ಏರಿಳಿತ ಕಾಣುತ್ತಿವೆ. ಹೀಗಾಗಿ ಸುಭದ್ರ ಹೂಡಿಕೆ ಮಾಡಲು ಬಯಸುವವರಿಗಾಗಿ ಚಿನ್ನ ಅತ್ಯಾಪ್ತ ಹೂಡಿಕೆ ಮಾರ್ಗವಾಗುತ್ತಿದೆ.
ಇತರ ಹೂಡಿಕೆಗಳಿಗೆ ಹೋಲಿಸಿದರೆ ಚಿನ್ನವು ಭಾರಿ ದೊಡ್ಡ ಪ್ರಮಾಣದ ಆದಾಯ ತಂದುಕೊಡಲಿಕ್ಕಿಲ್ಲ. ಆದರೆ, ಅನಿಶ್ಚಿತ ಆರ್ಥಿಕತೆಯಲ್ಲಿ ಇತರ ಹೂಡಿಕೆಗಳಿಗೆ ಹೋಲಿಸಿದರೆ ಚಿನ್ನದ ಮೇಲೆ ಹೂಡಿಕೆ ಮಾಡುವುದು ಬೆಸ್ಟ್. ದೇಶಗಳ ಕರೆನ್ಸಿ ಮೇಲೆ ಎಷ್ಟೇ ಇದ್ದರು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತಲೇ ಸಾಗುತ್ತಿದೆ.
ಯಾವಾಗ ವಿಶ್ವದಲ್ಲಿ ನಕಾರಾತ್ಮಕ ಪರಿಸ್ಥಿತಿ ಉಂಟಾಗುತ್ತದೆಯೋ ಆವಾಗಲೆಲ್ಲ ಚಿನ್ನದ ಬೆಲೆ ಹೆಚ್ಚಾಗುತ್ತದೆ ಎಂಬುದು ನೆನಪಿರಲಿ. ಈಗ ರಷ್ಯಾ - ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಸಾಗಿದೆ. ನಗದು ಹೂಡಿಕೆ ಮಾಡುವಾಗ ನಿಮ್ಮ ಹೂಡಿಕೆಗಳು ವಿಭಿನ್ನ ಸಂಪತ್ತುಗಳ ಮೇಲೆ ಹೂಡಿಕೆಯಾಗುವಂತೆ ನೋಡಿಕೊಳ್ಳಬೇಕು. ಚಿನ್ನದ ಮೇಲಿನ ಹೂಡಿಕೆಯು ನಿಮ್ಮ ಒಟ್ಟಾರೆ ಹೂಡಿಕೆಯ ಶೇ 5 ರಿಂದ 10 ರಷ್ಟನ್ನು ಮೀರದಿರಲಿ. ಬೇಕಾದಾಗ ಆಭರಣಗಳ ರೂಪದಲ್ಲಿ ಚಿನ್ನ ಖರೀದಿ ಮಾಡಬಹುದು.