ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಪರಿಸ್ಥಿತಿ ತಲೆದೋರಿದ್ದರೂ, ಜಾಗತಿಕ ತೈಲ ಬೆಲೆಗಳಲ್ಲಿ ಕುಸಿತವಾಗಿರುವುದು ಭಾರತೀಯ ಆರ್ಥಿಕತೆಗೆ ಬಹುದೊಡ್ಡ ಉತ್ತೇಜನ ಸಿಕ್ಕಂತಾಗಿದೆ. ತನ್ನ ಕಚ್ಚಾ ತೈಲ ಅಗತ್ಯದ ಶೇಕಡಾ 85 ಕ್ಕಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವ ಭಾರತಕ್ಕೆ ಈ ಬೆಳವಣಿಗೆ ಸಕಾರಾತ್ಮಕವಾಗಿದೆ.
ದುಬಾರಿ ವೆಚ್ಚದ ಆಮದುಗಳು ದೇಶೀಯ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಆಮದು ಪಾವತಿಗೆ ಹೆಚ್ಚಾಗಿ ಯುಎಸ್ ಡಾಲರ್ ಬಳಸುವುದರಿಂದ ರೂಪಾಯಿ ದುರ್ಬಲಗೊಳ್ಳುತ್ತದೆ. ಹೀಗಾಗಿ ತೈಲ ಬೆಲೆಗಳಲ್ಲಿನ ಏರಿಳಿತ ದೇಶದ ಆರ್ಥಿಕತೆಗೆ ಹಾನಿಯುಂಟು ಮಾಡುತ್ತದೆ.
ಒಪೆಕ್ ಮತ್ತು ತೈಲ ಕಾರ್ಟೆಲ್ ಕಂಪನಿಗಳು ಉತ್ಪಾದನೆ ಕಡಿತಕ್ಕೆ ಮುಂದಾದ ನಂತರ 2023 ರ ಜುಲೈ-ಅಕ್ಟೋಬರ್ ಅವಧಿಯಲ್ಲಿ ಭಾರತೀಯ ಕಚ್ಚಾ ತೈಲ ಆಮದಿನ ಬೆಲೆ ಏರಿಕೆಯಾಗಿದೆ. ಆದರೆ ಈಗ ಕಾಣಿಸಿಕೊಂಡಿರುವ ಜಾಗತಿಕ ಆರ್ಥಿಕ ಕುಸಿತದ ನಂತರ ತೈಲಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಕಚ್ಚಾ ತೈಲ ಬೆಲೆಗಳು ಮತ್ತೆ ಕುಸಿಯುತ್ತಿವೆ.
ಭಾರತೀಯ ಕಚ್ಚಾ ತೈಲ ಆಮದಿನ ಬೆಲೆ ಅಕ್ಟೋಬರ್ 2023 ರಲ್ಲಿ ಬ್ಯಾರೆಲ್ಗೆ ಸರಾಸರಿ 90.08 ಡಾಲರ್ ಮತ್ತು ಸೆಪ್ಟೆಂಬರ್ 2023 ರಲ್ಲಿ ಬ್ಯಾರೆಲ್ಗೆ 93.54 ಡಾಲರ್ ಆಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲದ ಬೆಲೆ ಈಗ ಬ್ಯಾರೆಲ್ ಗೆ 77 ಡಾಲರ್ ಗೆ ಇಳಿದಿದೆ. ಹೀಗಾಗಿ ಭಾರತೀಯ ತೈಲ ಆಮದಿನ ಬೆಲೆ ಇದಕ್ಕಿಂತಲೂ ಕಡಿಮೆಯಾಗಿರುತ್ತದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ, ಇಸ್ರೇಲ್-ಹಮಾಸ್ ಯುದ್ಧದಿಂದ ಉಂಟಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ತೈಲ ಬೆಲೆಗಳು ಹೆಚ್ಚಾಗಬಹುದು. ಆದರೆ ಬೇಡಿಕೆ ಕಡಿಮೆಯಾಗುವುದರಿಂದ ಕೊನೆಗೆ ತೈಲ ಬೆಲೆಗಳು ಕಡಿಮೆಯಾಗುತ್ತವೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಜಾಗತಿಕವಾಗಿ ಕಚ್ಚಾ ತೈಲಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ 2022 ರ ಮಾರ್ಚ್ನಲ್ಲಿ ಬೆಲೆಗಳು ಬ್ಯಾರೆಲ್ಗೆ 139 ಡಾಲರ್ಗೆ ಏರಿಕೆಯಾಗಿದ್ದವು. ಆದಾಗ್ಯೂ ದೇಶಗಳ ಕೇಂದ್ರ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿದ್ದರಿಂದ ಮತ್ತು ಆರ್ಥಿಕ ಹಿಂಜರಿತದ ಭೀತಿ ಎದುರಾಗಿದ್ದರಿಂದ ವರ್ಷದ ದ್ವಿತೀಯಾರ್ಧದಲ್ಲಿ ಬೆಲೆಗಳು ತೀವ್ರವಾಗಿ ಕುಸಿದವು.
ಮುಂದಿನ ಹಣಕಾಸು ವರ್ಷದಲ್ಲಿ (2024-25) ತೈಲ ಬೆಲೆಗಳು ಭಾರತೀಯ ಆರ್ಥಿಕತೆಗೆ ಪ್ರಮುಖ ಅಪಾಯವಾಗಿದೆ ಎಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅಭಿಪ್ರಾಯಪಟ್ಟಿದ್ದಾರೆ.