ಹೈದರಾಬಾದ್: ಕೊರೊನಾ ಸಾಂಕ್ರಾಮಿಕದ ನಂತರ ಗ್ರಾಹಕರು ಮತ್ತೆ ಖರೀದಿಸಲು ಒಲವು ತೋರುತ್ತಿದ್ದಾರೆ. ಇದರೊಂದಿಗೆ ಸಣ್ಣ ಸಾಲದ ಜೊತೆಗೆ ಕ್ರೆಡಿಟ್ ಕಾರ್ಡ್ ಬಳಕೆಯೂ ಹೆಚ್ಚಿದೆ. ಮತ್ತೊಂದೆಡೆ, ಕಾರ್ಡ್ ಕಂಪನಿಗಳು ಹೊಸ ಕಾರ್ಡ್ ತೆಗೆದುಕೊಳ್ಳುವವರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ.
ಹಬ್ಬದ ವೇಳೆ ವಿಶೇಷ ಆಫರ್ ನೀಡಿದ್ದ ಬ್ಯಾಂಕ್ಗಳು ಈಗ ಮತ್ತೆ ವರ್ಷಾಂತ್ಯದಲ್ಲಿ ಇಂತಹ ಆಫರ್ ನೀಡಲು ಮುಂದಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ಮುನ್ನ ಯಾವ ಅಂಶಗಳನ್ನು ಪರಿಗಣಿಸಬೇಕು ಎಂಬುದನ್ನು ತಿಳಿಯುವುದು ಉತ್ತಮ. ಕ್ರೆಡಿಟ್ ಕಾರ್ಡ್ ವಿಚಾರದಲ್ಲಿ ಜನರ ಆದಾಯ, ಕ್ರೆಡಿಟ್ ಸ್ಕೋರ್, ಕ್ರೆಡಿಟ್ ಹಿಸ್ಟರಿ ಎಲ್ಲವೂ ಮುಖ್ಯವಾಗಿರುತ್ತದೆ.
ಯೋಚಿಸಿ ಕ್ರೆಡಿಟ್ ಕಾರ್ಡ್ ಪಡೆಯಿರಿ:ನೀವು ಇಲ್ಲಿಯವರೆಗೆ ಯಾವುದೇ ರೀತಿಯ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿಲ್ಲದಿದ್ದರೆ, ಸಾಮಾನ್ಯವಾಗಿರುವ ಕಾರ್ಡ್ ಮಾತ್ರ ಒದಗಿಸಲಾಗಿದೆ. ಈಗಾಗಲೇ ಸಾಲಗಳನ್ನು ಹೊಂದಿರುವವರು ಮತ್ತು ಉತ್ತಮ ಮರುಪಾವತಿ ಇತಿಹಾಸವನ್ನು ಹೊಂದಿರುವವರು ಆಗಿದ್ದರೆ ಪ್ರೀಮಿಯಂ ಪ್ರಯೋಜನಗಳೊಂದಿಗೆ ಕಾರ್ಡ್ ನೀಡಲಾಗುತ್ತದೆ.
750ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಕ್ರೆಡಿಟ್ ಕಾರ್ಡ್ ಪಡೆಯಲು ಯಾವುದೇ ಸಮಸ್ಯೆ ಇಲ್ಲ. ಇಲ್ಲದಿದ್ದರೆ ಆದಾಯ ಸ್ಥಿರವಾಗಿಲ್ಲದವರು ಕಾರ್ಡ್ ತೆಗೆದುಕೊಳ್ಳುವಾಗ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಇಂತಹವರು ಸಾಮಾನ್ಯ ಕ್ರೆಡಿಟ್ ಕಾರ್ಡ್ ಬದಲಿಗೆ ಸ್ಥಿರ ಠೇವಣಿ ಆಧಾರಿತ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವುದು ಉತ್ತಮ.
ಇಲ್ಲಿ ಕಾರ್ಡ್ ಏಕೆ ತೆಗೆದುಕೊಳ್ಳಬೇಕೆಂಬುದು ಸಹ ಮುಖ್ಯವಾಗಿದೆ. ಇದು ನಿಮ್ಮ ಜೀವನಶೈಲಿ ವೆಚ್ಚಗಳಿಗಾಗಿಯೇ? ಅಥವಾ ನೀವು ಯಾವುದೇ ಖರೀದಿಗೆ ಬಳಸುತ್ತೀರಾ ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಜೊತೆಗೆ ನಿಮ್ಮ ಪಡೆಯುವ ಕಾರ್ಡ್ ನಿಮ್ಮ ಅಗತ್ಯಗಳನ್ನು ಪೂರೈಸುತ್ತವೆಯೇ ಎಂಬುವುದನ್ನೂ ಪರಿಶೀಲಿಸಬೇಕು.
ಉದಾಹರಣೆಗೆ ನೀವು ಆನ್‌ಲೈನ್‌ನಲ್ಲಿ ಸಾಕಷ್ಟು ಶಾಪಿಂಗ್ ಮಾಡುತ್ತಿದ್ದರೆ, ಆನ್‌ಲೈನ್‌ನಲ್ಲಿ ರಿಯಾಯಿತಿ ಕಾರ್ಡ್‌ಗಳ ಬಗ್ಗೆ ನೋಡಿ ಪಡೆಯಲು ಪ್ರಯತ್ನಿಸಿ. ಹೊಸ ಕಾರ್ಡ್‌ಗಳು ರಿಯಾಯಿತಿಗಳ ಹೆಸರಿನಲ್ಲಿ ಖರೀದಿಗಳನ್ನು ಪ್ರೋತ್ಸಾಹಿಸುತ್ತವೆ. ವಾಸ್ತವವಾಗಿ, ಅವು ನಿಮಗೆ ಎಷ್ಟು ಉಪಯುಕ್ತವಾಗಿವೆ ಎಂಬುದನ್ನೂ ನೀವು ಗಮನಿಸಬೇಕು.
ಕಾರ್ಡ್ಗಳಿಂದ ಸಿಗುತ್ತದೆ ರಿಯಾಯಿತಿ: ಈ ಕಾರ್ಡ್‌ಗಳು ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಪೂರೈಕೆ ಕಂಪನಿಗಳು ಮತ್ತು ಇತರ ಕೆಲವು ಬ್ರ್ಯಾಂಡ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತವೆ. ಈ ಪ್ರಯೋಜನಗಳು ನಿಮಗೆ ಯಾವಾಗ ಬೇಕಾದರೂ ಉಪಯೋಗವಾಗಬಹುದು ಅಥವಾ ಇಲ್ಲದಿರಬಹುದು. ಕಾರ್ಡ್ ತೆಗೆದುಕೊಳ್ಳುವಾಗ ಕಂಪನಿಗಳು ಉಚಿತವಾಗಿ ನೀಡುತ್ತಿದ್ದೇವೆ ಎನ್ನುತ್ತವೆ. ಆದರೆ, ಇದಕ್ಕೆ ಕೆಲವು ನಿಯಮಗಳು ಅನ್ವಯಿಸುತ್ತವೆ.
ಕೆಲವು ಕಾರ್ಡ್‌ಗಳು ವಾರ್ಷಿಕ ಶುಲ್ಕವನ್ನು ವಿಧಿಸುತ್ತವೆ ಮತ್ತು ಇದಕ್ಕೆ ಪ್ರತಿಯಾಗಿ ಕೆಲವು ಪ್ರಯೋಜನಗಳನ್ನೂ ನೀಡುತ್ತವೆ. ಇದು ಹೋಟೆಲ್, ಗಾಲ್ಫ್ ಕೋರ್ಸ್‌ಗಳು ಮತ್ತು ಏರ್‌ಪೋರ್ಟ್ ಲಾಂಜ್ ಪ್ರವೇಶದ ಮೇಲಿನ ರಿಯಾಯಿತಿಗಳನ್ನು ಒಳಗೊಂಡಿರುತ್ತದೆ. ನೀವು ಆಗಾಗ್ಗೆ ಪ್ರಯಾಣಿಸುವವರಾಗಿದ್ದರೆ, ಈ ರೀತಿಯ ಕಾರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಅನೇಕ ಕ್ರೆಡಿಟ್ ಕಾರ್ಡ್‌ಗಳು ಕೆಲವು ಬ್ರ್ಯಾಂಡ್‌ಗಳ ಸಹಯೋಗದೊಂದಿಗೆ ಸಹ ಬ್ರಾಂಡೆಡ್ ಕಾರ್ಡ್‌ಗಳನ್ನು ನೀಡುತ್ತವೆ. ಆಯಾ ಬ್ರಾಂಡ್‌ಗಳೊಂದಿಗೆ ನೀವು ಬಲವಾದ ಒಡನಾಟವನ್ನು ಹೊಂದಿದ್ದರೆ ಮಾತ್ರ ಈ ರೀತಿಯ ಕಾರ್ಡ್‌ಗಳು ನಿಮಗೆ ಪ್ರಯೋಜನಕಾರಿ. ನೀವು ಹೆಚ್ಚಿನ ಪ್ರತಿಫಲಗಳು ಮತ್ತು ರಿಯಾಯಿತಿಗಳನ್ನು ಪಡೆಯಬಹುದು. ಇಲ್ಲವಾದಲ್ಲಿ ಹೆಚ್ಚು ಉಪಯೋಗವಾಗದೇ ಇರಬಹುದು.
ನಿಯಮ ಮತ್ತು ಷರತ್ತು ತಿಳಿಯುವುದು ಉತ್ತಮ: ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ಆ ಕಾರ್ಡ್ನ ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ. ಬಿಲ್ಲಿಂಗ್ ದಿನಾಂಕಗಳ ಬಗ್ಗೆಯೂ ತಿಳಿದಿರಬೇಕು. ಬಿಲ್‌ಗಳನ್ನು ಸಮಯಕ್ಕೆ ಪಾವತಿಸಿದಾಗ ಮಾತ್ರ ಕ್ರೆಡಿಟ್ ಕಾರ್ಡ್ ಪ್ರಯೋಜನಕಾರಿಯಾಗಿದೆ. ಕನಿಷ್ಠ ಪಾವತಿ ಮತ್ತು ಬಿಲ್ ಬಾಕಿಗಳು ಹೆಚ್ಚಿನ ಬಡ್ಡಿಯನ್ನು ಆಕರ್ಷಿಸುವ ಸಾಧ್ಯತೆಯಿದೆ.
ಮತ್ತೊಂದು ಪ್ರಮುಖ ಅಂಶ ಎಂದರೆ ಯಾವುದೇ ಸಂದರ್ಭದಲ್ಲಿ ನೀವು ಕ್ರೆಡಿಟ್ ಕಾರ್ಡ್ ಬಳಸಿ ಹಣವನ್ನು ಹಿಂಪಡೆಯಬಾರದು. ಇದರ ಮೇಲಿನ ವಾರ್ಷಿಕ ಬಡ್ಡಿ ಶೇ.36ರಿಂದ 40ರಷ್ಟು ಆಗುವ ಸಾಧ್ಯತೆ ಇರುತ್ತದೆ. ನೀವು ಈಗಾಗಲೇ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಅಗತ್ಯವಿದ್ದರೆ ಇನ್ನೊಂದು ಕಾರ್ಡ್ ತೆಗೆದುಕೊಳ್ಳಿ. ಆದರೆ, ಕಾರ್ಡ್‌ಗಳನ್ನು ಕೊಡುತ್ತಾರೆ ಎಂಬ ಕಾರಣಕ್ಕೇ ತೆಗೆದುಕೊಳ್ಳುವುದು ಒಳ್ಳೆಯದಲ್ಲ.
ಇದನ್ನೂ ಓದಿ:ಸಾಲದಲ್ಲಿರುವಾಗ ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡಿ : ಹೊಸ ಸಾಲ ಮಾಡದೇ ಮಿತವ್ಯಯದಿಂದ ಬದುಕಿ