ಬೆಂಗಳೂರು:ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡಿಪಾಸಿಟ್ಗಳ ವಿಷಯದಲ್ಲಿ ಆರ್ಬಿಐ ನಿಯಮಗಳನ್ನು ಪರಿಷ್ಕರಣೆ ಮಾಡಿದ್ದು, ಗುರುವಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಅವಧಿಪೂರ್ವ ಹಿಂಪಡೆಯಬಹುದಾದ ಎಫ್ಡಿಗಳ ಮಿತಿಯನ್ನು ಈಗಿರುವ 15 ಲಕ್ಷ ರೂಪಾಯಿಗಳಿಂದ 1 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ. ಅಂದರೆ ಗ್ರಾಹಕರು ಇನ್ನು ಮುಂದೆ ತಮ್ಮ 1 ಕೋಟಿ ರೂಪಾಯಿವರೆಗಿನ ಎಫ್ಡಿಗಳನ್ನು ಅವಧಿಪೂರ್ವ ಹಿಂಪಡೆಯಬಹುದಾಗಿದೆ.
ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಎರಡು ರೀತಿಯ ಎಫ್ಡಿಗಳನ್ನು ತೆಗೆದುಕೊಳ್ಳುತ್ತವೆ. ಅವಧಿಪೂರ್ವ ಹಿಂಪಡೆಯಬಹುದಾದ (callable FDs) ಮತ್ತು ಅವಧಿಪೂರ್ವ ಹಿಂಪಡೆಯಲಾಗದ (non-callable FDs) ಹೀಗೆ ಎರಡು ರೀತಿಯ ಎಫ್ಡಿಗಳಿವೆ. ಅವಧಿಪೂರ್ವ ಹಿಂಪಡೆಯಬಹುದಾದ ಎಫ್ಡಿಗಳ ವಿಚಾರದಲ್ಲಿ ಎಫ್ಡಿಯ ಮೆಚ್ಯೂರಿಟಿ ಆಗುವ ಮುನ್ನವೇ ಅದನ್ನು ಹಿಂಪಡೆಯಬಹುದು. ಹಾಗೆಯೇ ಅವಧಿಪೂರ್ವ ಹಿಂಪಡೆಯಲಾಗದ ಎಫ್ಡಿಗಳಲ್ಲಿ ಮೆಚ್ಯೂರಿಟಿ ಆಗುವ ಮುನ್ನ ಎಫ್ಡಿ ಹಿಂಪಡೆಯಲು ಸಾಧ್ಯವಿಲ್ಲ. ನೀವು ಆರಂಭದಲ್ಲಿ ಎಷ್ಟು ಅವಧಿಗೆ ಎಫ್ಡಿ ಮಾಡಿಸಿರುತ್ತೀರೋ ಆ ಅವಧಿ ಮುಗಿದ ಮೇಲೆಯೇ ಅದರಲ್ಲಿನ ದುಡ್ಡು ಹಿಂಪಡೆಯಬಹುದು.
ಈ ಎರಡು ಬಗೆಯ ಎಫ್ಡಿಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 26ರ ಆರ್ಬಿಐ ನ ಹೊಸ ಅಧಿಸೂಚನೆಯನ್ನು ನೋಡುವುದಾದರೆ- 1. ಅವಧಿಪೂರ್ವ ಹಿಂಪಡೆಯಲಾಗದ ಎಫ್ಡಿ ನೀಡುವ ಕನಿಷ್ಠ ಮೊತ್ತವನ್ನು ಹದಿನೈದು ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ಗೆ ಹೆಚ್ಚಿಸಬಹುದು. ಅಂದರೆ ಒಂದು ಕೋಟಿ ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ಮೊತ್ತಕ್ಕೆ ವ್ಯಕ್ತಿಗಳಿಂದ ಸ್ವೀಕರಿಸಲಾದ ಎಲ್ಲಾ ದೇಶೀಯ ನಿಶ್ಚಿತ ಠೇವಣಿಗಳು ಅವಧಿಪೂರ್ವ ಹಿಂಪಡೆಯುವಿಕೆ ಸೌಲಭ್ಯವನ್ನು ಹೊಂದಿರುತ್ತವೆ. 2. ಈ ಸೂಚನೆಗಳು ಅನಿವಾಸಿ (ಬಾಹ್ಯ) ರೂಪಾಯಿ (ಎನ್ಆರ್ಇ) ಠೇವಣಿ / ಸಾಮಾನ್ಯ ಅನಿವಾಸಿ (ಎನ್ಆರ್ಓ) ಠೇವಣಿಗಳಿಗೂ ಅನ್ವಯಿಸುತ್ತವೆ.
ಈ ಬದಲಾವಣೆಗಳು ಎಲ್ಲಾ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ಅನ್ವಯವಾಗುತ್ತವೆ ಮತ್ತು ತಕ್ಷಣದಿಂದ ಜಾರಿಗೆ ಬರುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದರರ್ಥ ಈ ಹಿಂದೆ ನೀವು 15 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಎಫ್ಡಿ ಮಾಡಿದ್ದರೆ ಠೇವಣಿ ಪಕ್ವಗೊಳ್ಳುವ ಮೊದಲೇ ನೀವು ಬಯಸಿದರೆ, ನಿಮ್ಮ ಹಣವನ್ನು ಠೇವಣಿಯಿಂದ ಹಿಂಪಡೆಯಬಹುದಾಗಿತ್ತು. ಈಗ, ಈ ಮಿತಿಯನ್ನು 1 ಕೋಟಿ ರೂ.ಗೆ ವಿಸ್ತರಿಸಲಾಗಿದೆ. ಅಂದರೆ ಗ್ರಾಹಕರು ಈಗ 1 ಕೋಟಿ ರೂ.ವರೆಗಿನ ಯಾವುದೇ ಎಫ್ಡಿಯಿಂದ ತಮ್ಮ ಹಣವನ್ನು ಅಕಾಲಿಕವಾಗಿ ಹಿಂಪಡೆಯಲು ಅನುಮತಿಸಲಾಗುವುದು. ಸಾಮಾನ್ಯವಾಗಿ, ಬ್ಯಾಂಕುಗಳು ಸಾಮಾನ್ಯ ಠೇವಣಿಗಳಿಗಿಂತ ಅವಧಿಪೂರ್ವ ಹಿಂಪಡೆಯಲಾಗದ ಎಫ್ಡಿಗಳಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ.
ಇದನ್ನೂ ಓದಿ: ಬಿಟ್ ಕಾಯಿನ್ ಮೌಲ್ಯ ಒಂದೇ ದಿನದಲ್ಲಿ 61 ಸಾವಿರ ರೂಪಾಯಿ ಏರಿಕೆ