ನವದೆಹಲಿ : ವಿಶ್ವ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಆ್ಯಪಲ್ ಹಾಗೂ ಸ್ಯಾಮ್ಸಂಗ್ ಪಾರಮ್ಯ ಮೆರೆದಿವೆ. ಟ್ಯಾಬ್ಲೆಟ್ಗಳ ಮಾರಾಟದಲ್ಲಿ ಜಾಗತಿಕವಾಗಿ ಆ್ಯಪಲ್ ಮೊದಲ ಸ್ಥಾನದಲ್ಲಿ, ಸ್ಯಾಮ್ಸಂಗ್ ಎರಡನೇ ಸ್ಥಾನದಲ್ಲಿದ್ದು, ಒಟ್ಟಾರೆಯಾಗಿ ಎರಡೂ ಸೇರಿಕೊಂಡು ಶೇ 58 ರಷ್ಟು ಮಾರುಕಟ್ಟೆ ಪಾಲು ಹೊಂದಿವೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 35.2 ರಷ್ಟು ಪಾಲಿನೊಂದಿಗೆ ಆ್ಯಪಲ್ 10.8 ಮಿಲಿಯನ್ ಟ್ಯಾಬ್ಲೆಟ್ಗಳನ್ನು ಮಾರಾಟ ಮಾಡಿದೆ. ಹಾಗೆಯೇ ಸ್ಯಾಮ್ಸಂಗ್ ಶೇ 23.1 ರಷ್ಟು ಪಾಲಿನೊಂದಿಗೆ 7.1 ಮಿಲಿಯನ್ ಟ್ಯಾಬ್ಲೆಟ್ಗಳನ್ನು ಮಾರಾಟ ಮಾಡಿದೆ. ಹುವೇಯಿ ಶೇ 6.6 ರಷ್ಟು ಪಾಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ಇಂಟರ್ ನ್ಯಾಷನಲ್ ಡೇಟಾ ಕಾರ್ಪೊರೇಷನ್ನ ವರದಿ ಹೇಳಿದೆ.
ವಿಶ್ವಾದ್ಯಂತ ಟ್ಯಾಬ್ಲೆಟ್ ಮಾರಾಟವು 2023 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 19.1 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿತವನ್ನು ದಾಖಲಿಸಿ, 30.7 ಮಿಲಿಯನ್ ಯುನಿಟ್‌ಗಳನ್ನು ತಲುಪಿದೆ. ಕಡಿಮೆ ಮಾರಾಟದ ಪ್ರಮಾಣವನ್ನು ಈಗ ಸಾಂಕ್ರಾಮಿಕ ಪೂರ್ವ ಮಟ್ಟಗಳಿಗೆ ಹೋಲಿಸಬಹುದಾಗಿದೆ. 2019 ರ ಮೊದಲ ತ್ರೈಮಾಸಿಕದಲ್ಲಿ ಮಾರಾಟವಾದ 30.1 ಮಿಲಿಯನ್ ಯುನಿಟ್ ಹಾಗೂ 2018ರ ಪ್ರಥಮ ತ್ರೈಮಾಸಿಕದಲ್ಲಿ ಮಾರಾಟವಾದ 31.6 ಮಿಲಿಯನ್ ಯುನಿಟ್ಗಳಿಗೆ ಈ ವರ್ಷದ ಮಾರಾಟ ಪ್ರಮಾಣವು ಬಹುತೇಕ ಹತ್ತಿರವಿದೆ.
2023ರ ಮೊದಲ ತ್ರೈಮಾಸಿಕದಲ್ಲಿ ಟ್ಯಾಬ್ಲೆಟ್ ಮಾರಾಟ ಕಂಪನಿಗಳು ಎಚ್ಚರಿಕೆಯಿಂದಲೇ ಹೆಜ್ಜೆ ಇರಿಸಿದ್ದವು. ನಿರೀಕ್ಷೆಯಂತೆ ವಾಣಿಜ್ಯ ಮತ್ತು ಗ್ರಾಹಕ ಎರಡೂ ವಲಯಗಳಲ್ಲಿ ಮಾರಾಟ ಪ್ರಮಾಣ ಕಡಿಮೆಯಾಗಿತ್ತು ಎಂದರು ಅನುರೂಪಾ ನಟರಾಜ್. ಇವರು ಐಡಿಸಿ ಮೋಬಿಲಿಟಿ ಮತ್ತು ಕನ್ಸ್ಯೂಮರ್ ಡಿವೈಸ್ ಟ್ರ್ಯಾಕರ್ನ ಸೀನಿಯರ್ ರಿಸರ್ಚ್ ಅನಲಿಸ್ಟ್ ಆಗಿದ್ದಾರೆ. ಹೊಸ ಮಾಡೆಲ್ಗಳು ಲಾಂಚ್ ಆಗುವ ಮೊದಲು ಈಗ ಇರುವ ಹಳೆಯ ಸಂಗ್ರಹಣೆಯನ್ನು ಖಾಲಿ ಮಾಡುವುದಕ್ಕೆ ಮಾರಾಟಗಾರರು ಆದ್ಯತೆ ನೀಡುತ್ತಿರುವುದರಿಂದ 2023ರ ಮೊದಲಾರ್ಧದಲ್ಲಿ ಶಿಪ್ಮೆಂಟ್ಗಳ ಪ್ರಮಾಣ ಕಡಿಮೆ ಇರಲಿದೆ.