ನವದೆಹಲಿ: ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಕಂಪನಿಗಳನ್ನು 6.5 ಬಿಲಿಯನ್ ಡಾಲರ್ ನೀಡಿ ಸ್ವಾಧೀನಪಡಿಸಿಕೊಂಡ ಅದಾನಿ ಗ್ರೂಪ್ ತನ್ನ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಮತ್ತು ದೇಶದ ಅತಿಹೆಚ್ಚು ಲಾಭದ ಸಿಮೆಂಟ್ ಕಂಪನಿಯಾಗಿಸುವ ಯೋಜನೆಯನ್ನು ಹೊಂದಿದೆ ಎಂದು ಬಿಲಿಯನೇರ್ ಗೌತಮ್ ಅದಾನಿ ಹೇಳಿದ್ದಾರೆ.
ಎರಡೂ ಕಂಪನಿಗಳಲ್ಲಿ ಸ್ವಿಸ್ ಕಂಪನಿ ಹೋಲ್ಸಿಮ್ ಹೊಂದಿದ್ದ ಪಾಲು ಖರೀದಿಸುವ ಪ್ರಕ್ರಿಯೆಯನ್ನು ಅದಾನಿ ಗ್ರೂಪ್ ಕಳೆದ ವಾರ ಪೂರ್ಣಗೊಳಿಸಿತ್ತು. ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾವೇಶವೊಂದರಲ್ಲಿ ಗೌತಮ್ ಅದಾನಿ ಮಾತನಾಡಿದರು.
ಸ್ವಾಧೀನವನ್ನು ಐತಿಹಾಸಿಕ ಎಂದು ಕರೆದ ಅವರು, ಈ ಖರೀದಿಯು ಮೂಲಸೌಕರ್ಯ ಮತ್ತು ಸಾಮಗ್ರಿಗಳ ಕ್ಷೇತ್ರದಲ್ಲಿ ಭಾರತದ ಅತಿದೊಡ್ಡ ಒಳಬರುವ ಎಂ ಮತ್ತು ಎ ವ್ಯವಹಾರವಾಗಿದೆ ಮತ್ತು 4 ತಿಂಗಳ ದಾಖಲೆಯ ಸಮಯದಲ್ಲಿ ಇದು ಪೂರ್ಣಗೊಂಡಿದೆ ಎಂದರು.
ಸಿಮೆಂಟ್ ಕ್ಷೇತ್ರದಲ್ಲಿ ಮುನ್ನುಗ್ಗಲು ಕಾರಣಗಳನ್ನು ತಿಳಿಸಿದ ಅವರು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕನಾಗಿದೆ. ಆದರೆ ಅದರ ತಲಾ ವ್ಯಕ್ತಿಯ ಸಿಮೆಂಟ್ ಬಳಕೆಯು ಚೀನಾದ 1,600 ಕೆಜಿಗೆ ಹೋಲಿಸಿದರೆ ಕೇವಲ 250 ಕೆಜಿಯಷ್ಟಿದೆ. ಹೀಗಾಗಿ ಇನ್ನೂ ಸುಮಾರು 7 ಪಟ್ಟು ಬೆಳವಣಿಗೆಯ ಅವಕಾಶವಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಜೀವನ ಚರಿತ್ರೆ ಬಿಡುಗಡೆಗೆ ಸಿದ್ಧ