ಮುಂಬೈ:ಕೊರೊನಾ ವೈರಸ್ ಹಬ್ಬುವುದನ್ನು ನಿಯಂತ್ರಿಸಲು ದೇಶಾದ್ಯಂತ ಲಾಕ್ಡೌನ್ ವಿಸ್ತರಣೆ ಬಳಿಕ ಆರಂಭಗೊಂಡ ಮುಂಬೈ ಷೇರುಪೇಟೆಯಲ್ಲಿ ಗೂಳಿ- ಕರಡಿ ಮಧ್ಯೆ ವಹಿವಾಟು ಜಿದ್ದಾಜಿದ್ದಿನ ಕಾಳಗದಂತೆ ಕಂಡುಬಂತು.
ಮುಂಬೈ ಷೇರುಪೇಟೆ ಸಂವೇದಿ ಬುಧವಾರದ ವಹಿವಾಟಿನ ಆರಂಭಿಕ ಅವಧಿಯಲ್ಲಿ ಸೂಚ್ಯಂಕ ಸೆನ್ಸೆಕ್ಸ್ 813.33 ಅಂಶ ಏರಿಕೆ ಕಂಡು 31,543.91 ಅಂಶಗಳವರೆಗೂ ತಲುಪಿತು. ಮಧ್ಯಾಹ್ನದ ವೇಳೆಗೆ ಇಳಿಮುಖವಾಗಿ ನಷ್ಟ ದಾಖಲಾಯಿತು.
ಬ್ಯಾಂಕಿಂಗ್, ಫೈನಾನ್ಸ್ ಕಂಪನಿಗಳು, ಫಾರ್ಮಾ, ಎಫ್‌ಎಂಸಿಜಿ ಹಾಗೂ ಲೋಹ ವಲಯದ ಕಂಪನಿಗಳ ಷೇರುಗಳು ಗಳಿಕೆ ದಾಖಲಿಸಿದವು. ಯುಪಿಎಲ್, ಇಂಡಸ್‌ಇಂಡ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಐಟಿಸಿ, ಐಸಿಐಸಿಐ ಬ್ಯಾಂಕ್, ಗ್ಲೆನ್‌ಮಾರ್ಕ್, ಅರವಿಂದೊ ಫಾರ್ಮಾ, ಸನ್‌ಫಾರ್ಮಾ, ಸಿಪ್ಲಾ, ಡಾ.ರೆಡ್ಡೀಸ್, ಎಸ್‌ಬಿಐ, ಬ್ರಿಟಾನಿಯಾ, ಹಿಂದುಸ್ತಾನ್ ಯೂನಿಲಿವರ್ ಷೇರುಗಳು ಮಧ್ಯಾಹ್ನದ ವೇಳೆಯಲ್ಲಿ ಅಲ್ಪ ಗಳಿಕೆ ದಾಖಲಿಸಿದವು.
ಮಧ್ಯಾಹ್ನ 2ರ ನಂತರ ಷೇರುಪೇಟೆ ಸೂಚ್ಯಂಕಗಳು ತೀವ್ರ ಇಳಿಮುಖವಾದವು. ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 310.21 ಅಂಶ ಕುಸಿದು 30,379.81 ಅಂಶಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 68.55 ಅಂಶ ಇಳಿಕೆಯಾಗಿ 8,925.30 ಅಂಶಗಳಲ್ಲಿ ವಹಿವಾಟು ನಡೆಸಿತು.