ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಪ್ರವೃತ್ತಿಯ ನಡುವೆ ನಿನ್ನೆಯಿಂದ ಮುಂಬೈ ಷೇರುಪೇಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ನಡೆಯುತ್ತಿದ್ದು, ಇಂದು ದಿನದ ಆರಂಭದಲ್ಲೇ ಸೆನ್ಸೆಕ್ಸ್ 449 ಅಂಕಗಳ ಜಿಗಿತ ಕಂಡು 56,768ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 134 ಅಂಕಗಳ ಏರಿಕೆಯಾಗಿ 16,905ಕ್ಕೆ ತಲುಪಿದೆ.
ಇಂಡಸ್‌ಇಂಡ್ ಬ್ಯಾಂಕ್ ಲಾಭ ಗಳಿಸಿದ ಸಂಸ್ಥೆಗಳಲ್ಲಿ ಅಗ್ರಸ್ಥಾನದಲ್ಲಿತ್ತು. ಈ ಬ್ಯಾಂಕ್ ತನ್ನ ಷೇರುಗಳ ಮೌಲ್ಯದಲ್ಲಿ ಶೇ. 2ರಷ್ಟು ಹೆಚ್ಚಿಸಿಕೊಂಡಿದೆ. ನಂತರ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್ ಹಾಗೂ ಎಂ & ಎಂ ಲಾಭ ಕಂಡ ಇತರೆ ಸಂಸ್ಥೆಗಳಾಗಿವೆ. ಮತ್ತೊಂದೆಡೆ ಪವರ್‌ಗ್ರಿಡ್, ಏಷ್ಯನ್ ಪೇಂಟ್ಸ್, ವಿಪ್ರೋ ಹಾಗೂ ನೆಸ್ಲೆ ಇಂಡಿಯಾ ನಷ್ಟದಲ್ಲಿದ್ದವು.
ನಿನ್ನೆ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 497 ಅಂಕಗಳು ಏರಿಕೆಯಾಗಿ 56,319ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ನಿಫ್ಟಿ 156.65 ಪಾಯಿಂಟ್‌ಗಳ ಏರಿಕೆಯೊಂದಿಗೆ 16,770 ಕ್ಕೆ ತಲುಪಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದಿದ್ದಾರೆ. ಅವರು ನಿನ್ನೆ 1,209.82 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.