ನವದೆಹಲಿ: ಗಗನಕ್ಕೇರುತ್ತಿರುವ ಅಡುಗೆ ಎಣ್ಣೆ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪಾಮ್ ಆಯಿಲ್, ಸೋಯಾ ಆಯಿಲ್ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ಕಸ್ಟಮ್ ಸುಂಕವನ್ನು ಸರ್ಕಾರವು ಕಡಿತಗೊಳಿಸಿದ್ದು, ಖಾದ್ಯ ತೈಲ ಬೆಲೆಗಳ ಬೆಲೆ ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಖಾದ್ಯ ತೈಲದ ಮೇಲೆ ಕಸ್ಟಮ್ ಸುಂಕ ಕಡಿತ ಸಂಬಂಧ ಹೊರಡಿಸಿರುವ ನೋಟಿಫಿಕೇಷನ್ ಇಂದಿನಿಂದಲೇ ಜಾರಿಯಾಗಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಕಚ್ಚಾ ತಾಳೆ ಎಣ್ಣೆಯ ಮೇಲಿನ ಮೂಲ ಆಮದು ತೆರಿಗೆಯನ್ನು ಶೇಕಡಾ 10 ರಿಂದ 2.5 ಕ್ಕೆ ಇಳಿಸಲಾಗಿದೆ. ಕಚ್ಚಾ ಸೋಯಾಯಿಲ್ ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆಯನ್ನು ಶೇ 7.5 ರಿಂದ 2.5 ಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಸ್ಟಮ್ ಸುಂಕ ಇಳಿಕೆಯೊಂದಿ ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಯಿಲ್, ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆ ಶೇ. 24.75ರಷ್ಟು ಇಳಿಕೆಯಾಗಲಿದೆ. ಆದರೆ ಸಂಸ್ಕರಿಸಿದ ತಾಳೆ ಎಣ್ಣೆ, ಸೋಯಾಯಿಲ್ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆ ಶೇ.35.75ರಷ್ಟಾಗಲಿದೆ. ಚಿಲ್ಲರೆ ಬೆಲೆಯಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆಯಲ್ಲಿ 4 - 5 ರೂಪಾಯಿಗಳಷ್ಟು ಕಡಿಮೆಯಾಗಬಹುದು. ಸರ್ಕಾರವು ಸಾಸಿವೆ ಎಣ್ಣೆಯ ಮೇಲಿನ ಆಮದು ಸುಂಕವನ್ನು ತಗ್ಗಿಸಬೇಕು ಎಂದು ದ್ರಾವಕ ಹೊರ ತೆಗೆಯುವವರ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಬಿವಿ ಮೆಹ್ತಾ ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳಲ್ಲಿ ಕೇಂದ್ರ ಸರ್ಕಾರ ವಿವಿಧ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದೆ. ಸಗಟು ವ್ಯಾಪಾರಿಗಳು, ಮಿಲ್ಲರ್‌ಗಳು, ಸಂಸ್ಕರಣಾಗಾರರು ಹಾಗೂ ದಾಸ್ತಾನುದಾರರಿಂದ ಖಾದ್ಯ ತೈಲಗಳು ಮತ್ತು ಎಣ್ಣೆಬೀಜಗಳ ದಾಸ್ತಾನು ವಿವರಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳನ್ನು ಕೇಳಿದೆ.
ಇದನ್ನೂ ಓದಿ:ಬೆಲೆ ನಿಯಂತ್ರಣಕ್ಕೆ ಹರಸಾಹಸ: ಅಡುಗೆ ಎಣ್ಣೆ ಆಮದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ: ಕೇಂದ್ರ