ನವದೆಹಲಿ:ಚಿನ್ನದ ಧಾರಣೆಯು ದೇಶದ ಚಿನಿವಾರ ಪೇಟೆಯಲ್ಲಿ ಮತ್ತೊಮ್ಮೆ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೇರಿದ್ದು, 10 ಗ್ರಾಂಗೆ 35 ಸಾವಿರ ರೂಪಾಯಿಯ ಗಡಿ ದಾಟಿದೆ.
ಅಮೆರಿಕ-ಚೀನಾ ನಡುವೆ ನಡೆಯುತ್ತಿರುವ ಸುಂಕ ಸಮರ ಹಾಗೂ ಜಾಗತಿಕ ಆರ್ಥಿಕತೆಯ ಮಂದಗತಿ ಸೇರಿದಂತೆ ಇತ್ಯಾದಿ ಪ್ರತಿಕೂಲ ಪರಿಣಾಮಗಳಿಂದ ಹಳದಿ ಲೋಹದ ದರ ಏರುಗತಿಯಲ್ಲಿ ಸಾಗುತ್ತಿದೆ. ಚಿನ್ನ ಸುರಕ್ಷಿತ ಹೂಡಿಕೆಯ ತಾಣ ಆಗಿರುವುದರಿಂದ ಹೂಡಿಕೆದಾರರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್, ಸದ್ಯದಲ್ಲೇ ಬಡ್ಡಿದರ ಕಡಿತ ಕೈಗೊಳ್ಳುವ ಸುಳಿವು ನೀಡಿದ್ದು ಹೂಡಿಕೆದಾರರು ಚಿನ್ನದತ್ತ ಆಕರ್ಷಿತರಾಗಲು ಪ್ರಮುಖ ಕಾರಣವಾಗಿದೆ. ಈ ಒಂದು ನಡೆಯಿಂದ ಜಾಗತಿಕ ಷೇರುಪೇಟೆಗಳಲ್ಲೂ ಏರಿಕೆ ಕಂಡುಬಂದಿದೆ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ (ಎಂಸಿಎಕ್ಸ್) 10 ಗ್ರಾಂ. ಚಿನ್ನವು ಕಳೆದ ಆಗಸ್ಟ್ ತಿಂಗಳಲ್ಲಿ ₹ 35,145ಗೆ ಮಾರಾಟವಾಗಿದ್ದು,ಇಲ್ಲಿವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಎಂಸಿಎಕ್ಸ್ನಲ್ಲಿ ಇಂದು 10 ಗ್ರಾಂ. ಚಿನ್ನವು ದಿನದ ವಹಿವಾಟಿನ ಅತ್ಯಧಿಕ ₹ 34,850 ದರದಲ್ಲಿ ಮಾರಾಟ ಕಂಡು ₹ 35,380ರಲ್ಲಿ ಅಂತ್ಯಗೊಂಡಿತು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಗುಣಮಟ್ಟದ 10 ಗ್ರಾಂ. ಚಿನ್ನ ₹ 35,200, 24 ಕ್ಯಾರೆಟ್ ಬಂಗಾರ ₹ 34,000ಗೆ ವಹಿವಾಟು ನಡೆಸುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ನ 10 ಗ್ರಾಂ. ಚಿನ್ನ ₹ ₹ 35,560 ಹಾಗೂ 24 ಕ್ಯಾರೆಟ್ ಬಂಗಾರ ₹ 32,600ರಲ್ಲಿ ವಹಿವಾಟು ನಿರತವಾಗಿತ್ತು.