ನವದೆಹಲಿ:ಪ್ರಪಂಚದ ಉಳಿದ ಭಾಗಗಳು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವಾಗ ಭಾರತವು ಬೆಳವಣಿಗೆಯ ಹಾದಿಗೆ ಮರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಆರ್ಥಿಕತೆಯನ್ನು ಪುನರಾರಂಭ ಆಗುತ್ತಿದ್ದಂತೆ ಮತ್ತೆ ಬೆಳವಣಿಗೆ ಮರಳಿ ಪಡೆಯುವುದು ನಮ್ಮ ಧ್ಯೇಯವಾಗಿದೆ. ಭಾರತವು ತನ್ನ ಬೆಳವಣಿಗೆಯನ್ನು ಮರಳಿ ಪಡೆಯಲಿದೆ ಎಂದು ಪ್ರಧಾನಿ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಯ (ಸಿಐಐ) 125ನೇ ವಾರ್ಷಿಕ ಅಧಿವೇಶನದ ಪ್ರಯುಕ್ತ ನಡೆದ ವಿಡಿಯೋ ಸಂವಾದದಲ್ಲಿ ಹೇಳಿದರು.
ವಿಶ್ವ ವೇದಿಕೆಯಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಹಲವು ಕ್ಷೇತ್ರಗಳಿವೆ. ಆತ್ಮನಿರ್ಭರ ಭಾರತ ಎಂಬುದು ವಿದೇಶಿ ಸರಕುಗಳ ಮೇಲೆ ಭಾರತದ ಅವಲಂಬನೆ ಕಡಿಮೆ ಮಾಡುವುದು. ಆತ್ಮನಿರ್ಭರ ಭಾರತದಡಿ ನಾವು ಸಂಪೂರ್ಣವಾಗಿ ಸಂಯೋಜನೆಗೊಳ್ಳುತ್ತೇವೆ. ಜಾಗತಿಕ ಸಮುದಾಯ ಸಂಪೂರ್ಣ ಬೆಂಬಲ ನೀಡಲಿದೆ. ಯಾವಾಗಲೂ ನೆನಪಿಡಿ, ಭಾರತ ಇತರರ ಮೇಲೆ ಅವಲಂಬಿತರಾಗಲು ಬಯಸುವುದಿಲ್ಲ ಎಂದು ಹೇಳಿದರು.
ಭಾರತದಿಂದ ವಿಶ್ವದ ನಿರೀಕ್ಷೆಗಳು ಹೆಚ್ಚಿವೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯಕೀಯ ಸರಬರಾಜು ಮೂಲಕ 150ಕ್ಕೂ ಹೆಚ್ಚು ದೇಶಗಳಿಗೆ ಭಾರತ ಸಹಾಯ ಮಾಡಿದೆ. ಜಗತ್ತು ನಂಬಿಕೆಯ ವಿಶ್ವಾಸಾರ್ಹ ಪಾಲುದಾರನನ್ನು ಹುಡುಕುತ್ತಿದೆ. ಭಾರತ ಅಂತಹ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಮೋದಿ ಹೇಳಿದರು.
ಭಾರತದ ಬಿಕ್ಕಟ್ಟು ನಿರ್ವಹಣೆ ಮತ್ತು ಸಾಮರ್ಥ್ಯದ ಮೇಲೆ ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ಭಾರತದ ತಂತ್ರಜ್ಞಾನ, ಕೌಶಲ್ಯ, ನಾವಿನ್ಯತೆ, ಬುದ್ದಿವಂತಿಕೆ, ರೈತರ, ಎಂಎಸ್ಎಂಇ, ಉದ್ಯಮಿದಾರರ ಹಾಗೂ ಕೈಗಾರಿಕೆ ನಾಯಕರ ಮೇಲೆ ನನಗೆ ನಂಬಿಕೆ ಇದೆ. ಅವರು ಭಾರತವನ್ನು ಮರಳಿ ಅಭಿವೃದ್ಧಿಯ ಬೆಳವಣಿಗೆಯತ್ತೆ ಕರೆದೊಯ್ಯುತ್ತಾರೆ ಎಂದು ಪ್ರಧಾನಿ ಹೇಳಿದರು.
ಭಾರತ ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮ ದೇಶವನ್ನು ಇತರರೊಂದಿಗೆ ಹೋಲಿಸಿದಾಗ ಲಾಕ್‌ಡೌನ್ ನಮಗೆ ಹೇಗೆ ಸಹಾಯ ಮಾಡಿದೆ ಎಂಬುದನ್ನು ನಾವು ಅರಿತುಕೊಳ್ಳಬಹುದು ಎಂದು ಪರೋಕ್ಷವಾಗಿ ಕಾಂಗ್ರೆಸ್ನ ಟೀಕೆಗೆ ಸ್ಪಷ್ಟನೆ ನೀಡಿದರು.