ನವದೆಹಲಿ: ಕೋವಿಡ್-19 ಯುದ್ಧ ಸನ್ನಿವೇಶದಲ್ಲಿ ಆರ್ಥಿಕತೆಯ ಮೇಲೆ ಸೋಂಕು ಸೃಷ್ಟಿಸಿರುವ ಪ್ರಭಾವ ಬಗೆಗಿನ ಯೋಜನಾ ವರದಿ ಸಿದ್ಧಪಡಿಸುವಂತೆ ಎಲ್ಲ ಸಚಿವಾಲಯಗಳ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಕೊರೊನಾ ವೈರಸ್ ತಂದೊಡ್ಡಿರುವ ಈ ಬಿಕ್ಕಟ್ಟು 'ಮೇಕ್-ಇನ್-ಇಂಡಿಯಾ' ಅಭಿಯಾನ ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಲು ಒಂದು ಅವಕಾಶ. ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಎಂದು ಪ್ರತಿಪಾದಿಸಿದರು.
ಇದೇ ಪ್ರಥಮ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಸಂಪುಟ ಮಂಡಳಿಯ ಸಭೆ ನಡೆಸಿದರು. 21 ದಿನಗಳ ಲಾಕ್‌ಡೌನ್ ಮುಗಿದ ನಂತರ ಪ್ರತಿ ಸಚಿವಾಲಯವು 10 ಪ್ರಮುಖ ನಿರ್ಧಾರಗಳನ್ನು ಮತ್ತು 10 ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಬೇಕು ಎಂದು ಸೂಚಿಸಿದ್ದಾರೆ.
ಪ್ರತಿ ಸಚಿವಾಲಯಗಳು ವ್ಯವಹಾರ ಮುಂದುವರಿಕೆ ಯೋಜನೆಯನ್ನು ಸಿದ್ಧಪಡಿಸಬೇಕು. ಯುದ್ಧದ ಆಧಾರದ ಮೇಲೆ ಕೋವಿಡ್-19ರ ಆರ್ಥಿಕ ಪ್ರಭಾವದ ವಿರುದ್ಧ ಹೋರಾಡಲು ಸಿದ್ಧರಾಗಿರಬೇಕು. ಈ ಬಿಕ್ಕಟ್ಟು ಮೇಕ್ ಇನ್ ಇಂಡಿಯಾ ಅಭಿಯಾನ ವೃದ್ಧಿಸಲು ಮತ್ತು ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಒಂದು ಅವಕಾಶವಾಗಿದೆ ಎಂದು ಪ್ರಕಟಣೆಯಲ್ಲಿ ಸಚಿವರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ರೈತರ ಮತ್ತು ಬೆಳೆಗಳ ಕೊಯ್ಲು ಕುರಿತು ಮಾತನಾಡಿದ ಮೋದಿ, ಸಚಿವರುಗಳಿಗೆ ನವೀನ ಪರಿಹಾರಗಳ ಬಳಕೆಯನ್ನು ಅನ್ವೇಷಿಸಲು ಸೂಚಿಸಿದ್ದಾರೆ. ರೈತರನ್ನು ಸಂಪರ್ಕಿಸಲು ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸೇವೆಗಳ ಮಾರ್ಗದಲ್ಲಿ 'ಟ್ರಕ್ ಅಗ್ರಿಗೇಟರ್ಸ್' ಸಾಧನ ಬಳಸುವಂತೆ ಕರೆ ಕೊಟ್ಟಿದ್ದಾರೆ.
ಲಾಕ್‌ಡೌನ್ ಜಾರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿಯಮಗಳಿಗೆ ಎಲ್ಲರೂ ಕೈಜೋಡಿಸುವುದು ಅಗತ್ಯವಿದೆ ಎಂದು ಒತ್ತಿ ಹೇಳಿದರು. ಸಚಿವರು ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಉದಯೋನ್ಮುಖ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬೇಕು. ಸೋಂಕಿತರ ರಕ್ಷಣೆಗೆ ಹಾಗೂ ವೈರಸ್ ಅನ್ನು ಎದುರಿಸಲು ಜಿಲ್ಲಾ ಮಟ್ಟದ ಸೂಕ್ಷ್ಮ ಯೋಜನೆಗಳನ್ನು ರೂಪಿಸಬೇಕು ಎಂದರು.