ಹೈದರಾಬಾದ್: ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳ ಕಂಪನಿ ಪೇಟಿಎಂ ಸುಮಾರು 20,000 ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದು, ವ್ಯಾಪಾರಿಗಳಿಗೆ ಡಿಜಿಟಲ್ ಅಳವಡಿಕೆ ಕುರಿತು ಶಿಕ್ಷಣ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೇಟಿಎಂ ನೇಮಕಾತಿ ಜಾಹೀರಾತಿನ ಪ್ರಕಾರ, ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್‌ಗಳು (ಎಫ್‌ಎಸ್‌ಇ) ಮಾಸಿಕ ವೇತನ ಮತ್ತು ಕಮಿಷನ್‌ಗಳಲ್ಲಿ ರೂ. 35,000 ಮತ್ತು ಅದಕ್ಕಿಂತ ಹೆಚ್ಚಿನದನ್ನು ಗಳಿಸುವ ಅವಕಾಶವನ್ನು ಹೊಂದಿರುತ್ತಾರೆ. ಕಂಪನಿಯು ಯುವಕರು ಮತ್ತು ಪಿಯುಸಿ ಮುಗಿಸಿದವರನ್ನು ಎಫ್‌ಎಸ್‌ಇ ಆಗಿ ನೇಮಿಸಿಕೊಳ್ಳಲು ಮುಂದಾಗಿದೆ.
ಪೇಟಿಎಂ ಎಫ್‌ಎಸ್‌ಇಗಳನ್ನು ನೇಮಿಸಿಕೊಳ್ಳಲು ಆರಂಭಿಸಿದೆ. ಇದು 10 ನೇ ತರಗತಿ, 12 ನೇ ತರಗತಿ ಪಾಸಾದ ಅಥವಾ ಪದವೀಧರರಿಗೆ ಉತ್ತಮ ಅವಕಾಶವಾಗಿದೆ. ಇದು ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಉದ್ಯೋಗ ಸೃಷ್ಟಿಗೆ ಸಹಾಯ ಮಾಡುತ್ತದೆ. ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಇದು ವರದಾನವಾಗಲಿದೆ.
ಕಂಪನಿಯು ಮಹಿಳಾ ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿಯ ಬಗ್ಗೆ ಶಿಕ್ಷಣ ನೀಡುವ ಸಲುವಾಗಿ ಮಹಿಳೆ ಉದ್ಯೋಗಿಗಳಿಗೆ ಪ್ರೋತ್ಸಾಹಿಸಲು ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಪೇಟಿಎಂ ಆಲ್ ಇನ್ ಒನ್ ಕ್ಯೂಆರ್ ಕೋಡ್‌ಗಳು, ಪೇಟಿಎಂ ಆಲ್ ಇನ್ ಒನ್ ಪಿಒಎಸ್ ಯಂತ್ರಗಳು, ಪೇಟಿಎಂ ಸೌಂಡ್‌ಬಾಕ್ಸ್ ಹಾಗೂ ಕಂಪನಿಯ ಪರಿಸರ ವ್ಯವಸ್ಥೆಯಾದ ವ್ಯಾಲೆಟ್, ಯುಪಿಐ, ಪೇಟಿಎಂ ಪೋಸ್ಟ್‌ಪೇಯ್ಡ್, ವ್ಯಾಪಾರಿ ಸಾಲ ಸೇರಿದಂತೆ ಎಲ್ಲಾ ಉತ್ಪನ್ನಗಳು ಮತ್ತು ವಿಮಾ ಕೊಡುಗೆಗಳ ಬಗ್ಗೆ ಎಫ್‌ಎಸ್‌ಇ ಪ್ರೊಮೋಟ್ ಮಾಡಲು ಉತ್ತೇಜಿಸುತ್ತದೆ.