ನವದೆಹಲಿ: ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪತ್ರಕರ್ತರು ಕೇಳಿದ ಆರ್ಥಿಕ 'ನಿಶ್ಚಲತೆ' ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಭಾರತದ ಆರ್ಥಿಕತೆಯು 'ನಿಶ್ಚಲತೆ'ಯ ಹಂತಕ್ಕೆ ಪ್ರವೇಶ ಪಡೆಯುತ್ತಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಹಣಕಾಸು ಸಚಿವರು, 'ಆರ್ಥಿಕತೆಯು ಎಲ್ಲಿದೆ ಎಂಬುದರ ಕುರಿತು ಚರ್ಚಿಸಲು ನಾನು ಸಿದ್ಧವಿಲ್ಲ. ವಿಷಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮಾತ್ರ ನಾನು ಆಸಕ್ತಿ ಹೊಂದಿದ್ದೇನೆ. ಈ ಬಗ್ಗೆ ವ್ಯಾಖ್ಯಾನ ನಡೆಯುತ್ತಿದೆ ಎಂಬುದನ್ನು ನಾನು ಕೇಳಿದ್ದೇನೆ. ನನ್ನಲ್ಲಿ ಆ ಬಗ್ಗೆ ಯಾವುದೇ ಪ್ರತಿಕ್ರಿಯೆಗಳಿಲ್ಲ' ಎಂದು ಹೇಳಿದರು.
ನವೆಂಬರ್ ಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರವು ಶೇ. 5.54ಕ್ಕೆ ಏರಿದ್ದರ ಬಗ್ಗೆ ಹಲವು ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದರು. ಹಿಂದಿನ ತಿಂಗಳ ಹಣದುಬ್ಬರ ಸಂಖ್ಯೆಯಿಂದ 92 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಯಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, 'ಈ ಹಿಂದೆ ಇಂತಹ ಘಟನೆ ಸಂಭವಿಸಿದ್ದಾಗ ಭಾರತ ತೆಗೆದುಕೊಂಡ ನಿರ್ಧಾರಗಳತ್ತ ಗಮನಹರಿಸಬೇಕು' ಎಂದು ಸಲಹೆ ನೀಡಿದ್ದರು. ಇದರ ಜೊತೆಗೆ 2019ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಆರು ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಆದರೆ, ಸೀತಾರಾಮನ್ ಅವರು ಯಾವುದೇ ಸ್ಪಷ್ಟ ಹೇಳಿಕೆ ನೀಡದೆ ಜಾರಿಕೊಂಡಿದ್ದಾರೆ.
ಉಜ್ವಲಾ ಯೋಜನೆಯ ದುರುಪಯೋಗದ ಅಪಾಯದ ಬಗ್ಗೆ ಸಿಎಜಿ ಮುನ್ನೆಚ್ಚರಿಕೆ ನೀಡಿದ್ದನ್ನು ಪ್ರಸ್ತಾಪಿಸಿದ ಸೀತಾರಾಮನ್ ಅವರು, ಸರ್ಕಾರದ ಸಂಪೂರ್ಣ ಪ್ರಯತ್ನವೆಂದರೆ ನೇರ ಲಾಭ ವರ್ಗಾವಣೆಯು(ಡಿಬಿಟಿ) ಯಾವುದೇ ಮಧ್ಯವರ್ತಿಗಳ ಪಾಲಾಗದಂತೆ ನೋಡಿಕೊಳ್ಳುವುದು. ಸಿಎಜಿ ಕೂಡ ಈ ಕುರಿತು ಎಚ್ಚರಿಸಿದ್ದು ನನಗೆ ಸಂತೋಷವಾಗಿದೆ. ಇದು ಈಗಾಗಲೇ ಸಂಭವಿಸಿದೆ ಎಂದು ಅವರು ಹೇಳಿಲ್ಲ. ಡಿಬಿಟಿಯನ್ನು ಬಳಸುವ ಮೂಲಕ ಸಮಸ್ಯೆಯನ್ನು ಎದುರಿಸುತ್ತೇವೆ ಎಂದರು.
ಜಿಎಸ್‌ಟಿ ಸ್ಲ್ಯಾಬ್ ಏರಿಕೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಎಸ್‌ಟಿ ದರ ಏರಿಕೆ ಕುರಿತು ಇನ್ನೂ ಚರ್ಚಿಸಿಲ್ಲ. ಇದು ಎಲ್ಲಿಂದ ಬರುತ್ತಿದೆ ಎಂದು ನನಗೆ ತಿಳಿದಿಲ್ಲ. ನಾನು ಇನ್ನೂ ಜಿಎಸ್‌ಟಿ ಮಂಡಳಿಗೆ ಹೋಗಿಲ್ಲ. ಹೀಗಾಗಿ, ಇದು ಅವರನ್ನು (ಹಣಕಾಸು ಸಚಿವಾಲಯ ತಂಡ) ದರ ಹೆಚ್ಚಳಕ್ಕೆ ವಿನಂತಿಸಲು ಹೋಗುತ್ತದೆಯೇ ಅಥವಾ ಪರಿಶೀಲನೆಗೆ ಕೇಳಿಕೊಳ್ಳುತ್ತದೆಯೇ? ನಾವು ಈ ಬಗ್ಗೆ ಏನೂ ಮಾತನಾಡಲಿಲ್ಲ ಎಂದು ಸ್ಪಷ್ಟನೆ ನೀಡಿದರು.