ಮುಂಬೈ:ಮಧ್ಯಮ ವರ್ಗದ ಹೆಚ್ಚಿನ ಜನರು ತಮ್ಮ ಲಾಭಾಂಶದ ಮೇಲೆ ಇನ್ನು ಮುಂದೆ ಕಡಿಮೆ ದರದಲ್ಲಿ ತೆರಿಗೆ ಪಾವತಿಸಲಿದ್ದಾರೆ. ಹೊಸ ಪ್ರಸ್ತಾವಿತ ನಿಯಮಗಳಡಿ ಮಧ್ಯಮ ವರ್ಗದವರು ತಮ್ಮ ಕೈಯಲ್ಲಿ ಹೆಚ್ಚಿನ ಹಣ ಹೊಂದುತ್ತಾರೆ. ಅಂತಹ ಹಣಕಾಸು ಮಸೂದೆ ಜಾರಿಗೆ ಬರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದಾರೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಉದ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತೆರಿಗೆ ಸಂಬಂಧಿಸಿದ ಕಾನೂನುಗಳನ್ನು ನ್ಯಾಯಸಮ್ಮತಗೊಳಿಸಲು ಬಯಸುತ್ತೇವೆ. ಇದನ್ನು ಕಂಪನಿಗಳ ಕಾಯ್ದೆಯಿಂದ ಆರಂಭಿಸಿದ್ದೇವೆ ಮತ್ತು ಈಗ ಆದಾಯ ತೆರಿಗೆ ಕಾಯ್ದೆಯನ್ನು ಎದುರು ನೋಡುತ್ತಿದ್ದೇವೆ. ತೆರಿಗೆ ವಿಚಾರವಾಗಿ ನಾಗರಿಕ ಅಪರಾಧಗಳನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸದಂತೆ ಎಚ್ಚರ ವಹಿಸಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ ದೇಶದಲ್ಲಿ ತೆರಿಗೆ ಆಡಳಿತವನ್ನು ಸರಳಗೊಳಿಸುವತ್ತ ಸಾಗುವುದು ಪ್ರಸ್ತುತ ಸರ್ಕಾರದ ಮುಖ್ಯ ಉದ್ದೇಶ. ನೇರ ತೆರಿಗೆ ಸಂಹಿತೆ ಸಮಿತಿಯ ಹಲವು ಶಿಫಾರಸುಗಳನ್ನು ಜಾರಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಸೀತಾರಾಮನ್ ಹೇಳಿದರು.