ನವದೆಹಲಿ:ಕಪ್ಪುಹಣ ಹೂಡಿಕೆಗೆ ತಾಣ ಎನಿಸಿದ್ದ ರಿಯಲ್ ಎಸ್ಟೇಟ್ ಉದ್ಯಮವು ಕಳೆದ ಎರಡು-ಮೂರು ವರ್ಷಗಳಿಂದ ನೋಟ್ ಬ್ಯಾನ್ ಮತ್ತು ಜಿಎಸ್‌ಟಿ ಹೊಡತಕ್ಕೆ ಸಿಲುಕಿ ನಲುಗಿತ್ತು. 2019ರಲ್ಲಿ ಉದ್ಯಮದ ಪೂರಕ ಕಚ್ಚಾ ಸರಕುಗಳ ಮೇಲಿನ ತೆರಿಗೆ ಕಡಿತದಂತಹ ಸುಧಾರಣಾ ಕ್ರಮಗಳಿಂದ ಅದು ಅಲ್ಪ ಮಟ್ಟದಲ್ಲಿ ಚೇತರಿಸಿಕೊಂಡಿದೆ. ವಾಣಿಜ್ಯ ರಿಯಲ್ ಎಸ್ಟೇಟ್ ಸೋದರ ಸಂಬಂಧಿಯಾದ ವಸತಿ ಉದ್ಯಮ ತನ್ನ ಕಳಪೆ ಸಾಧನೆಯನ್ನು 2019ರಲ್ಲಿಯೂ ಮುಂದುವರೆಸಿದೆ.
ವರ್ಷವಿಡೀ ಸರ್ಕಾರವು ಕೈಗೊಂಡ ಕೆಲವು ಕ್ರಮಗಳ ಹೊರತಾಗಿಯೂ ವಸತಿ ಆಸ್ತಿಗಳ ಮಾರಾಟವು ಸ್ವಲ್ಪಮಟ್ಟಿಗೆ ಹೆಚ್ಚಳವಾಯಿತು. ಆದರೆ, ಆಫೀಸ್ ಸ್ಪೇಸ್ ಗುತ್ತಿಗೆಯು 40 ಪ್ರತಿಶತದಷ್ಟು ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ 46.5 ಮಿಲಿಯನ್ ಚದರ ಅಡಿಗೆ ತಲುಪಿತು. ಭಾರತದ ಮೊದಲ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ ಸುಮಾರು 5,000 ಕೋಟಿ ರೂ.ವರೆಗೂ ಹಂಚಿಕೆ ಮಾಡಿತು.
ರಿಯಲ್ ಎಸ್ಟೇಟ್ನ ವಸತಿ ವಿಭಾಗವು ಕಳಪೆ ಮಾರಾಟ ಮತ್ತು ತೀವ್ರವಾದ ಹಣದ ಬಿಕ್ಕಟ್ಟಿನಿಂದ ವರ್ಷವಿಡಿ ಹೆಣಗಾಡಿತು. ಗೃಹ ಬಳಕೆದಾರರು ತಮ್ಮ ಕನಸಿನ ಮನೆಗಳನ್ನು ಪಡೆಯಲು ಅನಿವಾರ್ಯವಾಗಿ ಹೋರಾಟ ಮಾಡಬೇಕಾಯಿತು. ಅನೇಕ ಬಿಲ್ಡರ್‌ಗಳು ದಿವಾಳಿತನದಿಂದ ನ್ಯಾಯಾಲಯದ ಮುಂದೆ ನಿಲ್ಲಬೇಕಾಯಿತು.
2019ರಲ್ಲಿ ಭಾರತೀಯ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಾವುದೇ ಮಹತ್ವದ ಬೆಳವಣಿಗೆ ಕಂಡುಬರಲಿಲ್ಲ. ನಗದು ಬಿಕ್ಕಟ್ಟು, ವಿಳಂಬವಾದ ಪ್ರಾಜೆಕ್ಟ್ಗಳಿಂದ ಕೆಲವು ಬಿಲ್ಡರ್‌ಗಳು ದಿವಾಳಿತನ ಘೋಷಿಸಿದರು ಮತ್ತು ರಾಷ್ಟ್ರೀಯ ಕಂಪನಿ ಕಾನೂನಿನ ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಟಿ) ಪ್ರಕರಣಗಳ ವಿಚಾರಣೆಗಳು ಈ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾದವು ಎಂದು ಕ್ರೆಡೈ ಅಧ್ಯಕ್ಷ ಸತೀಶ್ ಮಗರ್ ಹೇಳಿದರು.