ನವದೆಹಲಿ:ತ್ರೈಮಾಸಿಕದ ಆರಂಭದಿಂದಲೂ ಪ್ರಮುಖ ಕೈಗಾರಿಕೆಗಳನ್ನು ಬೆಂಬಿಡದಂತೆ ಕಾಡಿದ ಕೋವಿಡ್-19 ಸೋಂಕಿನಿಂದ ಉದ್ಯೋಗ ಕಡಿತ ಕ್ಷೀಣಿಸಿ, ಉದ್ಯೋಗ ನೀಡಿಕೆ ಚೇತರಿಸಿಕೊಳ್ಳುತ್ತಿದೆ. ಮುಂಬರುವ ವರ್ಷದಲ್ಲಿ ನೇಮಕಾತಿ ಚಟುವಟಿಕೆಗಳು ಮತ್ತೆ ಪುಟಿದೇಳಲಿವೆ ಎಂದು ನೌಕ್ರಿ ಡಾಟ್ ಕಾಮ್ ಸಮೀಕ್ಷೆ ತಿಳಿಸಿದೆ.
ಶೇ. 26ರಷ್ಟು ನೇಮಕಾತಿದಾರರು ಮುಂದಿನ 3-6 ತಿಂಗಳಲ್ಲಿ ಕೋವಿಡ್ ಪೂರ್ವ ಹಂತಕ್ಕೆ ಮರಳುವ ಮುನ್ಸೂಚನೆ ಕಾಣುತ್ತಿದೆ ಎಂದಿದ್ದರೆ, 34 ಪ್ರತಿಶತದಷ್ಟು ಜನರು ಆರು ತಿಂಗಳಿಂದ ಒಂದು ವರ್ಷದ ತೆಗೆದುಕೊಳ್ಳುತ್ತದೆ ಎಂದಿದ್ದಾರೆ ಎಂಬುದು ಉದ್ಯೋಗ ಪೋರ್ಟಲ್‌ನ ಹೈರಿಂಗ್ ಔಟ್‌ಲುಕ್ ಸಮೀಕ್ಷೆಯಿಂದ ತಿಳಿದು ಬಂದಿದೆ.
ದೇಶಾದ್ಯಂತ 1,327 ನೇಮಕಾತಿದಾರರು ಮತ್ತು ಸಲಹೆಗಾರರನ್ನು ಒಳಗೊಂಡ ಈ ಸಮೀಕ್ಷೆಯು ಮುಂಬರುವ ವರ್ಷಕ್ಕೆ ಉದ್ಯೋಗಾಕಾಂಕ್ಷಿಗಳು ಆಶಾವಾದಿ ಆಗಿರಬೇಕು ಎಂದಿದೆ.
2020ರಲ್ಲಿ ವೈದ್ಯಕೀಯ / ಆರೋಗ್ಯ, ಐಟಿ, ಬಿಪಿಓ / ಐಟಿಇಎಸ್ ಮುಂತಾದ ಕೈಗಾರಿಕೆಗಳು ಕಡಿಮೆ ಒತ್ತಡ ಅನುಭವಿಸಿದ್ದರೆ, ಚಿಲ್ಲರೆ ವ್ಯಾಪಾರ, ಆತಿಥ್ಯ ಮತ್ತು ಪ್ರಯಾಣದಂತಹ ಕೆಲವು ಉದ್ಯಮಗಳು ಸಂಕಷ್ಟ ನಿಭಾಯಿಸಲು ಹೆಣಗಾಡಿದವು.