ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದ ಬಿಲ್ ಕೇಳಿ ಪಡೆದರೆ 10 ಲಕ್ಷ ರೂ.ಯಿಂದ 1 ಕೋಟಿ ರೂ. ವರೆಗೆ ಲಾಟರಿ ಗೆಲ್ಲುವ ಅವಕಾಶವನ್ನು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಒದಗಿಸಲಿದೆ.
ಜಿಎಸ್‌ಟಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಗ್ರಾಹಕರಿಗೆ ಉತ್ತೇಜನ ನೀಡುವ ಉದ್ದೇಶ ಈ ಯೋಜನೆಯಲ್ಲಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ಬರುವ ಪ್ರತಿಯೊಂದು ರಸೀದಿಗೂ ಲಾಟರಿ ಗೆಲ್ಲುವ ಅವಕಾಶ ಇರಲಿದೆ. ತೆರಿಗೆ ಪಾವತಿದಾರರಿಗೆ ಇದು ಇನ್ಸೆಂಟಿವ್ ರೂಪದಲ್ಲಿ ಉತ್ತೇಜನ ನೀಡಲಿದೆ.
ಗ್ರಾಹಕ (ಬಿ- 2- ಸಿ: ವಹಿವಾಟಿನಿಂದ ಗ್ರಾಹಕರಿಗೆ) ವಹಿವಾಟಿಗೆ ಎಲ್ಲಾ ವ್ಯವಹಾರಗಳ ಇನ್‌ವಾಯ್ಸ್‌ಗಳಿಗೆ ಪ್ರತಿ ತಿಂಗಳು ಲಕ್ಕಿ ಡ್ರಾಗಳನ್ನು ನಡೆಸಲಿದೆ. ಏಪ್ರಿಲ್ 1ರಿಂದ ಜಿಎಸ್‌ಟಿ ಅಡಿಯಲ್ಲಿ 10 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಲಾಟರಿ ಕೊಡುಗೆಗಳನ್ನು ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಸರಕುಗಳನ್ನು ಖರೀದಿಸಲು ಗ್ರಾಹಕರನ್ನು ಉತ್ತೇಜಿಸಲು ಮತ್ತು ಅಂಗಡಿಗಳಿಂದ ಮಾನ್ಯತೆ ಪಡೆದ ಜಿಎಸ್‌ಟಿ ಬಿಲ್ ತೆಗೆದುಕೊಂಡು ಲಾಟರಿ ಮೂಲಕ ಆಯ್ಕೆ ಮಾಡುವ ಯೋಜನೆಯನ್ನು ಕಂದಾಯ ಇಲಾಖೆ ವಹಿಸಿಕೊಳ್ಳಲಿದೆ. ಜಿಎಸ್‌ಟಿ ಅಡಿಯಲ್ಲಿ ಪ್ರತಿ ಬಿಲ್ ಬಹುಮಾನ ವಿಜೇತ ಲಾಟರಿ ಟಿಕೆಟ್ ಆಗಿರಬೇಕು. ಸರಕುಗಳನ್ನು ಖರೀದಿಸಿದ ನಂತರ ಗ್ರಾಹಕರು ತೆಗೆದುಕೊಳ್ಳುವ ಬಿಲ್ ಮೂಲಕ ಲಾಟರಿ ಗೆಲ್ಲುವ ಅವಕಾಶದ ಆಯ್ಕೆ ಇರುತ್ತದೆ.
ಈ ಯೋಜನೆಯಡಿ ಕಂದಾಯ ಇಲಾಖೆಯು ಮಾಸಿಕ ಲಕ್ಕಿ ಡ್ರಾಗಳನ್ನು ನಡೆಸುತ್ತದೆ. ಅದು ಒಂದು ಬಂಪರ್ ಬಹುಮಾನವನ್ನು ಕೊಡುತ್ತದೆ. ಆದರೆ, ಎರಡನೇ ಮತ್ತು ಮೂರನೇ ಬಹುಮಾನಗಳು ರಾಜ್ಯವಾರು ಇರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.