ನವದೆಹಲಿ:ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಳಂಬ ಪಾವತಿಯ ನಿವ್ವಳ ತೆರಿಗೆ ಹೊಣೆಗಾರಿಕೆ ಮೇಲೆ ಸೆಪ್ಟೆಂಬರ್ 1ರಿಂದ ಬಡ್ಡಿ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ವರ್ಷದ ಆರಂಭದಲ್ಲಿ ಉದ್ಯಮಗಳ ವಿಳಂಬ ಜಿಎಸ್‌ಟಿ ಪಾವತಿಯ ಮೇಲೆ ಸುಮಾರು 46,000 ಕೋಟಿ ರೂ. ಒಟ್ಟು ತೆರಿಗೆ ಹೊಣೆಗಾರಿಕೆಯ ಮೇಲೆ ಬಡ್ಡಿ ವಿಧಿಸಲಾಯಿತು.
ಕೇಂದ್ರ ಮತ್ತು ರಾಜ್ಯ ವಿತ್ತ ಸಚಿವರು ಮಾರ್ಚ್ನಲ್ಲಿ ನಡೆಸಿದ್ದ ಜಿಎಸ್‌ಟಿ ಮಂಡಳಿಯ 39ನೇ ಸಭೆಯಲ್ಲಿ 2017ರ ಜುಲೈ 1ರಿಂದ ಜಾರಿಗೆ ಬರುವಂತೆ ನಿವ್ವಳ ತೆರಿಗೆ ಹೊಣೆಗಾರಿಕೆಯ ಮೇಲೆ ಜಿಎಸ್‌ಟಿ ಪಾವತಿಸಲು ವಿಳಂಬವಾಗುವ ಬಡ್ಡಿ ವಿಧಿಸಲು ನಿರ್ಧರಿಸಿತ್ತು. ಈ ಕಾನೂನನ್ನು ಈ ಹಿಂದೆ ತಿದ್ದುಪಡಿ ಮಾಡಲಾಗಿತ್ತು.
ಆಗಸ್ಟ್ 25 ರಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) 2020ರ ಸೆಪ್ಟೆಂಬರ್ 1ರಂದು ನಿವ್ವಳ ತೆರಿಗೆ ಹೊಣೆಗಾರಿಕೆ ಮೇಲೆ ಬಡ್ಡಿ ವಿಧಿಸುವ ದಿನಾಂಕ ಎಂದು ಸೂಚಿಸಿದೆ.
ಎಎಂಆರ್ಜಿ ಮತ್ತು ಅಸೋಸಿಯೇಟ್ಸ್ ಹಿರಿಯ ಪಾಲುದಾರ ರಜತ್ ಮೋಹನ್ ಈ ಬಗ್ಗೆ ಮಾತನಾಡಿ, ಈ ಅಧಿಸೂಚನೆಯು ಜಿಎಸ್‌ಟಿ ಮಂಡಳಿ ನಿರ್ಧಾರಗಳ ಜೊತೆಗೆ ಸಂಪರ್ಕ ಕಡಿತಗೊಂಡಂತೆ ತೋರುತ್ತದೆ. ಇದರಲ್ಲಿ ತೆರಿಗೆ ಪಾವತಿದಾರರಿಗೆ 2017ರ ಜುಲೈ 1ರಿಂದ ಈ ಪ್ರಯೋಜನ ಲಭ್ಯವಾಗಲಿದೆ ಎಂದು ಭರವಸೆ ನೀಡಲಾಗಿತ್ತು ಎಂದರು.
ಈ ಲಾಭದ ನಿರೀಕ್ಷಿತ ಲಭ್ಯತೆ ಎಂದರೆ ಜಿಎಸ್‌ಟಿ ಅನುಷ್ಠಾನ ದಿನಾಂಕದಿಂದ 3 ವರ್ಷಗಳವರೆಗೆ ಲಕ್ಷಾಂತರ ತೆರಿಗೆದಾರರು ಬಡ್ಡಿಯ ಬೇಡಿಕೆ ಎದುರು ನೋಡುತ್ತಿದ್ದಾರೆ. ಬಡ್ಡಿ ಆಧಾರದ ಮೇಲೆ ಈ ನ್ಯಾಯಸಮ್ಮತವಲ್ಲದ ಮತ್ತು ಕಾನೂನು ಬಾಹಿರ ಬೇಡಿಕೆಯ ವಿರುದ್ಧ ವ್ಯವಹಾರಸ್ಥರು ಮತ್ತೆ ಹೈಕೋರ್ಟ್ ಸಂಪರ್ಕಿಸುವ ನಿರೀಕ್ಷೆಯಿದೆ ಎಂದು ಮೋಹನ್ ಹೇಳಿದರು.
ಒಟ್ಟು ತೆರಿಗೆಯ ಆಧಾರದ ಮೇಲೆ ವಿಳಂಬವಾದ ಜಿಎಸ್‌ಟಿ ಪಾವತಿ ಮೇಲಿನ ಬಡ್ಡಿ ಲೆಕ್ಕಾಚಾರವನ್ನು ಜಿಎಸ್‌ಟಿ ಕಾಯ್ದೆ ಅನುಮತಿಸುತ್ತದೆ ಎಂದು ಸಿಬಿಐಸಿ ಈ ಹಿಂದೆ ಹೇಳಿತ್ತು. 2019ರ ಏಪ್ರಿಲ್ 18ರಂದು ತೆಲಂಗಾಣ ಹೈಕೋರ್ಟ್ ತೀರ್ಪಿನಲ್ಲಿ ಈ ಹೇಳಿಕೆ ಎತ್ತಿಹಿಡಿದಿತ್ತು.
ಒಟ್ಟು ಜಿಎಸ್‌ಟಿ ಹೊಣೆಗಾರಿಕೆಯಿಂದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಕಡಿತಗೊಳಿಸಿದ ನಂತರ ನಿವ್ವಳ ಜಿಎಸ್ಟೆ ಹೊಣೆಗಾರಿಕೆ ಉಳಿಯುತ್ತೆ. ಒಟ್ಟು ಜಿಎಸ್‌ಟಿ ಹೊಣೆಗಾರಿಕೆಯ ಮೇಲಿನ ಬಡ್ಡಿ ಲೆಕ್ಕಹಾಕುವುದು ವ್ಯವಹಾರಗಳ ಮೇಲಿನ ಪಾವತಿ ಹೊರೆ ಹೆಚ್ಚಿಸುತ್ತದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿ ನೋಂದಾಯಿತ ಸಂಯೋಜನಾ ಯೋಜನೆಯಡಿ ಮತ್ತು ತ್ರೈಮಾಸಿಕ ರಿಟರ್ನ್ ಫೈಲ್ ಹೊರತುಪಡಿಸಿ ವರ್ತಕರು ಮುಂದಿನ ತಿಂಗಳು 11ರ ಒಳಗೆ ತೆರಿಗೆ ಹೊಣೆಗಾರಿಕೆ ತೋರಿಸುವ ರಿಟರ್ನ್ಸ್ (ಜಿಎಸ್‌ಟಿಆರ್ -1) ಸಲ್ಲಿಸಬೇಕು. ಜಿಎಸ್‌ಟಿಆರ್ -3ಬಿ ಅನ್ನು 20- 24ರ ಮತ್ತು ನಡುವೆ ಸಲ್ಲಿಸುವ ಮೂಲಕ ತೆರಿಗೆ ಪಾವತಿಸಬೇಕು (ವ್ಯವಹಾರಗಳು ನೋಂದಾಯಿತ ರಾಜ್ಯಕ್ಕೆ ಅನುಗುಣವಾಗಿ ನಿಗದಿತ ದಿನಾಂಕ ಬದಲಾಗುತ್ತದೆ).
ಜಿಎಸ್‌ಟಿ ಮೌಲ್ಯಮಾಪಕರು ನಿಗದಿತ ದಿನಾಂಕದ ನಂತರ ತೆರಿಗೆ ಪಾವತಿಸಿದರೂ ವಿಳಂಬವಾದ ಪಾವತಿಯ ಕಾರಣದಿಂದಾಗಿ ಬಡ್ಡಿ ಪಾವತಿಸದಿರುವ ಪ್ರಕರಣಗಳಿವೆ. ಒಟ್ಟು ತೆರಿಗೆ ಹೊಣೆಗಾರಿಕೆ ಅಥವಾ ನಿವ್ವಳ ತೆರಿಗೆ ಹೊಣೆಗಾರಿಕೆಯ ಮೇಲೆ ಬಡ್ಡಿ ಪಾವತಿಸಬೇಕೇ ಎಂಬ ಅನುಮಾನಗಳಿವೆ. ವಿಳಂಬವಾದ ತೆರಿಗೆ ಪಾವತಿಗೆ ಶೇ 18ರಷ್ಟು ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.