ಇನ್ನೇನು 2020ನೇ ವರ್ಷ ದುಃಖಾಂತ್ಯ ಆಗುವುದಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿಯಿದೆ. ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡಿದ ಮಾರಣಾಂತಿಕ ಕೊರೊನಾ ವೈರಸ್, ಭಾರತ ಸೇರಿ ಜಾಗತಿಕ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿತು. ಜಗತ್ತಿನೆಲ್ಲೆಡೆ ಆರ್ಥಿಕ ಕುಸಿತ ಕಂಡುಬಂತು. ಅಮೆರಿಕ, ರಷ್ಯಾ, ಜರ್ಮನಿ, ಜಪಾನ್, ಸೌದಿ ಅರೇಬಿಯಾ ಸೇರಿ ಸೇರಿ ಘಟಾನುಘಟಿ ರಾಷ್ಟ್ರಗಳು ಸಹ ಕೊರೊನಾ ಆರ್ಥಿಕ ಹಿಂಜರಿತದಿಂದ ಪಾರಾಗಲು ಆಗಲಿಲ್ಲ.
ಸೋಂಕು ತಂದ ಸಂಕಷ್ಟಕ್ಕೆ ಜಾಗತಿಕ ಜಿಡಿಪಿ ಬೆಳವಣಿಗೆ ಪಾತಾಳ ಕಂಡಿತು. ಕೈಗಾರಿಕಾ ಬೆಳವಣಿಗೆ ದರ ಕುಸಿಯಿತು. ವಸತಿ, ವಾಹನೋದ್ಯಮ, ಪ್ರವಾಸೋದ್ಯಮ, ಆತಿಥ್ಯ, ಮಾಹಿತಿ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ ಸೇರಿ ಹಲವು ಮೂಲಭೂತ ಸೌಕರ್ಯಗಳ ಮಾರುಕಟ್ಟೆ ಕಳಾಹೀನವಾದವು. ಪೂರೈಕೆ ಸರಪಳಿ ಕಳಚಿ ಬೇಡಿಕೆ ಕುಸಿಯಿತು. ಉತ್ಪಾದನೆ ಕುಂಠಿತಗೊಂಡು ಉದ್ಯೋಗ ಕಡಿತವಾದವು. ಪ್ರಪಾತ ಕಂಡ ಜಿಡಿಪಿ ಎಂಬ ಸುದ್ದಿಗಳು ನಿತ್ಯದ ಸಾಮಾನ್ಯ ಶೀರ್ಷಿಕೆಯಾದವು. ಲಾಕ್ಡೌನ್ನಿಂದ ನಗರದಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರು ಮನೆಗೆ ತೆರಳಲು ಪರಿತಪಿಸಿದರು. ಕೆಲವರು ನಡೆದುಕೊಂಡು ಮನೆ ತಲುಪಿದರೆ, ಮತ್ತೆ ಕೆಲವರು ಪ್ರಾಣ ಕಳೆದುಕೊಂಡರು. ಕೊರೊನಾ ಆರ್ಥಿಕ ವರ್ಷದಲ್ಲಿ ಭಾರತದ ಅರ್ಥವ್ಯವಸ್ಥೆ ಸಮಗ್ರ ನೋಟ ಇಲ್ಲಿದೆ.
ಮಾರ್ಚ್ನಿಂದ ಶುರುವಾದ ಸಾವಿನ ನೋಟ:
ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಕೇರಳ ಮೂಲದ ಭಾರತೀಯ ವಿದ್ಯಾರ್ಥಿಗೆ ಕೊರೊನಾ ವೈರಸ್ ತಗುಲಿರುವುದು 2019ರ ಜನವರಿ 30ರಂದು ದೃಢಪಟ್ಟು ಇದು ದೇಶದ ಪ್ರಥಮ ಪ್ರಕರಣ ಎನ್ನಿಸಿತು. ಸೌದಿ ಅರೇಬಿಯಾದಿಂದ ಆಗಮಿಸಿದ್ದ ಕಲಬುರಗಿಯ 76 ವರ್ಷದ ವೃದ್ಧ ಸೋಂಕಿನಿಂದ ಮಾರ್ಚ್ 12ರಂದು ಸಾವನ್ನಪ್ಪಿದ ಮೊದಲ ಪೀಡಿತ. ಇಲ್ಲಿಂದ ಶುರುವಾದ ಕೊರೊನಾ ಸಾವು-ನೋವಿನ ವೈರಸ್ ಆಟ 1.02 ಕೋಟಿ ಸೋಂಕಿತರು ಹಾಗೂ 1.47 ಲಕ್ಷ ಮೃತರ (ಡಿ. 28) ತನಕ ಬಂದು ನಿಂತಿದೆ.
ಕೋವಿಡ್ ಭೀಕರತೆ ಅರಿತ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರಿಂದ 31ರ ತನಕ ಮೊದಲ ಹಂತದ ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದರು. ವೈರಸ್ ಹರಡುವುದನ್ನು ತಡೆಯುವ ಪ್ರಯತ್ನದ ಭಾಗವಾಗಿ ಲಾಕ್‌ಡೌನ್ ಮೊರೆ ಹೋಗಬೇಕಾಯಿತು. ಇಡೀ ಅರ್ಥ ವ್ಯವಸ್ಥೆಯನ್ನು ಬೀಗ ಹಾಕಿ ಮೂಲಗೆ ತಳ್ಳಲಾಯಿತು. ಜನರು ತುರ್ತು ಪರಿಸ್ಥಿತಿ ಹೊರತುಪಡಿಸಿ ಪ್ರಯಾಣಿಸಬಾರದು. ಅಗತ್ಯ ಕೆಲಸಗಳನ್ನು ಮಾತ್ರವೇ ಕೈಗೊಳ್ಳಿ. ಆಹಾರ, ಔಷಧ, ಮತ್ತು ಇತರ ಅಗತ್ಯ ಸರಕುಗಳನ್ನು ಖರೀದಿಸಬೇಕು, ಜನರು ಮನೆಯಲ್ಲಿಯೇ ಇರಬೇಕು. ಹೊರ ಬರಬಾರದು ಎಂದು ಆದೇಶಿಸಲಾಯಿತು.
ಭಾರತದಾದ್ಯಂತ ಹಠಾತ್ತನೆ ಘೋಷಿಸಿದ ಲಾಕ್‌ಡೌನ್ ವಿಶ್ವದಲ್ಲೇ ಅತಿ ದೊಡ್ಡ ಅವಧಿಯದ್ದಾಗಿದೆ. 1.3 ಬಿಲಿಯನ್ ಭಾರತೀಯರು ಮನೆಯಲ್ಲಿ ಕೂರಬೇಕಾಯಿತು. ಕೆಲವು ಅಗತ್ಯ ಸೇವೆಗಳು ಮತ್ತು ಚಟುವಟಿಕೆಗಳನ್ನು ಹೊರತುಪಡಿಸಿ, ಭಾರತದ 2.9 ಟ್ರಿಲಿಯನ್ ಡಾಲರ್ ಆರ್ಥಿಕತೆಯು ಸ್ಥಗಿತಗೊಂಡಿತು.
ಪಾತಾಳ ಕಂಡ ಜಿಡಿಪಿ:
ನಿರೀಕ್ಷೆಯಂತೆ ಭಾರತದ ಆರ್ಥಿಕತೆಯು ಕೊರೊನಾ ಹಾಗೂ ಲಾಕ್‌ಡೌನ್ ಪರಿಣಾಮದಿಂದ ಸುಮಾರು 40 ವರ್ಷಗಳಲ್ಲೇ ಮೊದಲ ಬಾರಿಗೆ ಸಂಕುಚಿತಗೊಂಡಿತು. ಕೇಂದ್ರೀಯ ಸಾಂಖ್ಯಿಕ ಸಂಸ್ಥೆ (ಸಿಎಸ್‌ಒ) ಹೊರಡಿಸಿದ ಜಿಡಿಪಿಗೆ ಸಂಬಂಧಿಸಿದ ದತ್ತಾಂಶದಲ್ಲಿ 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 23.9ರಷ್ಟು ಕುಗ್ಗಿತು. ಭಾರತೀಯ ಆರ್ಥಿಕತೆಯು 1979ರ ಬರಗಾಲದ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರವು ಸಾರ್ವಕಾಲಿಕ ಕನಿಷ್ಠ ಶೇ. 5.2ರಷ್ಟಕ್ಕೆ ತಲುಪಿತು. ಇದೇ ಅವಧಿಯಲ್ಲಿ ಅಮೆರಿಕ ಮತ್ತು ಇಟಲಿ ಕ್ರಮವಾಗಿ ಶೇ. 9.1ರಷ್ಟು ಹಾಗೂ 17.7ರಷ್ಟು ಕ್ಷೀಣಿಸಿದವು.
ಬ್ಯಾಲೆನ್ಸ್ ಕಳೆದುಕೊಂಡ ಬ್ಯಾಂಕಿಂಗ್:
ಕೋವಿಡ್-19 ಸಾಂಕ್ರಾಮಿಕವು ಭಾರತದ ಬ್ಯಾಂಕಿಂಗ್ ಕ್ಷೇತ್ರ ಅದರಲ್ಲೂ ವಿಶೇಷವಾಗಿ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ದುರ್ಬಲಗೊಳಿಸಿತು. ಎನ್‌ಬಿಎಫ್‌ಸಿ ಕುಸಿದು ಬಿದ್ದಾಗ ಎನ್‌ಬಿಎಫ್‌ಸಿಗಳು 2018ರಲ್ಲಿ ದ್ರವ್ಯತೆ ಬಿಕ್ಕಟ್ಟಿನಿಂದ ಬಳಲುತ್ತಿದ್ದವು. ಅನುತ್ಪಾದಕ ಆಸ್ತಿ ಹೊರೆಯಿಂದ ಸಾರ್ವಜನಿಕ ವಲಯದ ಬ್ಯಾಂಕ್ಗಳು ಕೂಡ ಬೆಳವಣಿಗೆಗೆ ಹಿಮ್ಮುಖವಾಗಿದ್ದವು. 2020ರ ಏಪ್ರಿಲ್ನಿಂದ ಬ್ಯಾಂಕ್ಗಳ ಸಾಲದ ಬೆಳವಣಿಗೆ ಕುಂಠಿತಗೊಂಡಿರುವುದು ಮಾತ್ರವಲ್ಲದೆ ಅವುಗಳ ಆಸ್ತಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿತು. ತತ್ಪರಿಣಾಮವಾಗಿ ಚಿಲ್ಲರೆ ಮತ್ತು ಎಂಎಸ್‌ಎಂಇ ವಿಭಾಗದ ಲಾಭ ರಹಿತ ಸಾಲದ ಪ್ರಮಾಣ ಹೆಮ್ಮರದಂತೆ ಬೆಳೆಯಿತು.
2020ರ ಜುಲೈನಲ್ಲಿ ರಿಸರ್ವ್ ಬ್ಯಾಂಕ್ನ ಹಣಕಾಸು ಸ್ಥಿರತೆ ವರದಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿಯ ಪ್ರಮಾಣ 2021ರ ಮಾರ್ಚ್ ವೇಳೆಗೆ ಶೇ. 14.7ಕ್ಕೆ ಏರಿಕೆ ಆಗಬಹುದೆಂದು ಅಂದಾಜಿಸಿತು. ಕಾರ್ಯನಿರ್ವಹಿಸದ ಸ್ವತ್ತುಗಳ ಏರಿಕೆಯು ಹೆಚ್ಚಿನ ಸಾಲ ವೆಚ್ಚಗಳಿಗೆ ಕಾರಣವಾಗುತ್ತದೆ. ಇದು ಬ್ಯಾಂಕ್ಗಳ ನಷ್ಟ ಹೀರಿಕೊಳ್ಳುವ ತಿಗಣೆಯಂತೆ ಆಗುತ್ತದೆ. ಬ್ಯಾಂಕ್ಗಳ ಲಾಭದಾಯಕತೆಯ ಕತ್ತು ಹಿಸುಕುತ್ತವೆ ಎಂದು ಎಚ್ಚರಿಸಿತು.
ಬ್ಯಾಂಕ್ ಸಾಲಗಾರರಿಗೆ ಉದ್ದೇಶಿತ ಪರಿಹಾರ ನೀಡಲು ಅಗತ್ಯವಿರುವ 26 ಕ್ಷೇತ್ರಗಳನ್ನು ಕೆವಿ ಕಾಮತ್ ಸಮಿತಿ ಆಯ್ಕೆ ಮಾಡಿತು. ಸಾಂಕ್ರಾಮಿಕ ಪೀಡಿತ ಸಾಲಗಳ ಪುನರ್ ರಚನೆ ಹಣಕಾಸಿನ ಅಗತ್ಯ ಇರುವ ಉದ್ಯಮಗಳನ್ನು ಪಟ್ಟಿ ಮಾಡಿತು. ಒಟ್ಟು ಬ್ಯಾಂಕಿಂಗ್ ಸಾಲದ ಶೇ. 29.4ರಷ್ಟು ಸಾಂಕ್ರಾಮಿಕ ರೋಗದಿಂದ ಮಾತ್ರ ಪ್ರಭಾವಿತವಾಗಿದೆ. ಏಕಾಏಕಿ ಉಂಟಾದ ಭಯದಿಂದ ಜನರು ಒತ್ತಡಕ್ಕೆ ಒಳಗಾಗಿ ಶೇ. 42.1ರಷ್ಟು ಸಾಲವಿದೆ ಎಂಬ ಅಂಶ ಕಂಡುಕೊಂಡಿತು.
ಬ್ಯಾಂಕಿಂಗ್ ಕ್ಷೇತ್ರದ ಶೇ. 72ರಷ್ಟು ಸಾಲವು ಸಾಂಕ್ರಾಮಿಕದಿಂದ ಪ್ರಭಾವಿತವಾಗಿದೆ. ಆದ್ದರಿಂದ ಸಂಭಾವ್ಯ ಪರಿಹಾರದ ಅಪಾಯಗಳನ್ನು ನಿವಾರಿಸಲು ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಬಂಡವಾಳ ಬೆಂಬಲ ಒದಗಿಸುವ ಹೊರೆ ಸರ್ಕಾರದ ಮೇಲೆ ಬಿತ್ತು.