ನವದೆಹಲಿ:ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿ ಅವರ ಪ್ರಯಾಣಕ್ಕಾಗಿ ಸಿದ್ಧಪಡಿಸಲಾದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದ ಎರಡು ಬೋಯಿಂಗ್ 777 ವಿಮಾನಗಳು ಇಂದು ದೆಹಲಿಗೆ ಬರಲಿವೆ.
ಅಮೆರಿಕದ ವಿಮಾನ ತಯಾರಕ ಬೋಯಿಂಗ್ ಆಗಸ್ಟ್‌ನಲ್ಲಿ ಏರ್ ಇಂಡಿಯಾಕ್ಕೆ ವಿಶೇಷ ವಿಮಾನಗಳನ್ನು ತಲುಪಿಸಲು ನಿರ್ಧರಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ವಿತರಣೆಯು ವಿಳಂಬವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋಯಿಂಗ್‌ನಿಂದ ವಿಮಾನ ಸ್ವೀಕರಿಸಲು ಹಿರಿಯ ಅಧಿಕಾರಿಗಳು ಆಗಸ್ಟ್ ಮಾಸಿಕದ ಮೊದಲ ವಾರದಲ್ಲಿ ಅಮೆರಿಕಕ್ಕೆ ತೆರಳಿದ್ದಾರೆ. ಏರ್ ಇಂಡಿಯಾ ಒನ್ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಟೆಕ್ಸಾಸ್‌ನಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷರ ವಿಶೇಷ ವಿಮಾನದಂತೆ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳನ್ನು ಬೋಯಿಂಗ್ 777 ವಿಮಾನಗಳು ಹೊಂದಿದೆ. ಕ್ಷಿಪಣಿ ನಿರೋಧ ವ್ಯವಸ್ಥೆಯ ಜೊತೆಗೆ ಕ್ಷಿಪಣಿಗಳ ಮಾರ್ಗ ತಪ್ಪಿಸುವ ಚಾಣಾಕ್ಷ ಕೃತಕ ಬುದ್ಧಿಮತೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಪ್ರಧಾನಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಮೋದಿ ಅವರು ವಿದೇಶಿ ಪ್ರವಾಸ ಹಾಗೂ ಇತರ ವಿಶೇಷ ಸಂಚಾರಕ್ಕೆ ಮಾತ್ರವೇ ಈ ವಿಮಾನಗಳನ್ನು ಬಳಸುತ್ತಾರೆ. ಸಭಾ ಕೊಠಡಿಗಳು, ಸಂವಹನಕ್ಕಾಗಿ ಆಧುನಿಕ ವ್ಯವಸ್ಥೆ, ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಪ್ರತ್ಯೇಕ ಕಾರ್ಯಾಲಯ ಇರಲಿದೆ. ಅಮೆರಿಕದ ಡಲ್ಲಾಸ್ನಲ್ಲಿ 1,345 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ವಿಮಾನಗಳು ಏರ್ ಇಂಡಿಯಾ ಒನ್ ವಿಮಾನಗಳ ಪಡೆಗೆ ಸೇರ್ಪಡೆ ಆಗಲಿವೆ.
ಭಾರತೀಯ ವಾಯುಪಡೆಯ ಪೈಲಟ್ಗಳ ಜೊತೆಗೆ ಈ ಅತ್ಯಾಧುನಿಕ ವಿವಿಒಐಪಿ ವಿಮಾನವನ್ನು ಹಾರಿಸಲು 40 ಏರ್ ಇಂಡಿಯಾ ಪೈಲಟ್ಗಳ ತಂಡಕ್ಕೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಒಮ್ಮ ಇಂಧನ ಭರ್ತಿ ಮಾಡಿದ ನಂತರ 17 ಗಂಟೆಗಳಿಗೂ ಅಧಿಕ ಕಾಲ ನಿರಂತರವಾಗಿ ಪ್ರಯಾಣ ನಡೆಸಬಲ್ಲದು.