ಬೀಜಿಂಗ್ :ವಿಶ್ವಕ್ಕೆಲ್ಲ ಕೊರೊನಾ ಸೋಂಕು ಹರಡಿಸಿದ ಚೀನಾದಲ್ಲಿ ವಿಮಾನಯಾನ ಕ್ಷೇತ್ರದ ಹಾರಾಟ ಕೋವಿಡ್-19 ಪೂರ್ವದ ಅವಧಿಗೆ ಮರುಳಿದೆ. ಸಹಜ ಸ್ಥಿಯತ್ತ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಚೀನಾದ ದೇಶೀಯ ವಾಯುಯಾನವು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂಪೂರ್ಣ ಚೇತರಿಸಿಕೊಂಡಿದೆ ಎಂದು ಪ್ರಮುಖ ಟ್ರಾವೆಲ್ ಅನಾಲಿಟಿಕ್ಸ್ ಕಂಪನಿಯೊಂದು ತಿಳಿಸಿದೆ. ಅದು ಬಿಡುಗಡೆ ಮಾಡಿದ ವರದಿಯ ಮಾಹಿತಿ ಪ್ರಕಾರ, ಏಷ್ಯಾದ ದೈತ್ಯ ವಿಮಾನಯಾನ ಮಾರುಕಟ್ಟೆ ಸೆಪ್ಟೆಂಬರ್ ಆರಂಭದ ವೇಳೆಗೆ ಸಂಪೂರ್ಣ ಚೇತರಿಸಿಕೊಳ್ಳಲಿದೆ ಎಂದು ಅಂದಾಜಿಸಿದೆ. ಆಗಸ್ಟ್ ಎರಡನೇ ವಾರದಲ್ಲಿ ಚೀನಾದ ವಿಮಾನ ನಿಲ್ದಾಣಗಳಿಗೆ ದೇಶೀಯ ಆಗಮನವು ಕಳೆದ ವರ್ಷದ ಮಟ್ಟಕ್ಕಿಂತ ಶೇ.86ಕ್ಕೆ ತಲುಪಿದೆ. ಫ್ಲೈಟ್ ಬುಕಿಂಗ್ ಶೇ.98ಕ್ಕೆ ತಲುಪಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಉಲ್ಲೇಖಿಸಿ ಫಾರ್ವರ್ಡ್ ಕೀಸ್ ಹೇಳಿದೆ.
ಇದೊಂದು ಅತ್ಯಂತ ಮಹತ್ವದ ಕ್ಷಣವಾಗಿದೆ. ಕೋವಿಡ್ -19 ಆರಂಭವಾದ ನಂತರ ವಿಶ್ವದ ಎಲ್ಲಾ ವಾಯುಯಾನ ಮಾರುಕಟ್ಟೆಗಳು ಅಪಾರ ಹೊಡೆತ ಕಂಡಿದ್ದು, ಚೀನಾದ ಈ ಉದ್ಯಮವು ಸಾಂಕ್ರಾಮಿಕ ಪೂರ್ವದ ಹಂತಕ್ಕೆ ಮರಳಿದೆ ಎಂದು ಇನ್ಸೈಟ್ ಉಪಾಧ್ಯಕ್ಷ ಆಲಿವಿಯರ್ ಪೊಂಟಿ ಫಾರ್ವರ್ಡ್ಕೀಸ್ನಲ್ಲಿ ಹೇಳಿದರು.
ಪೂರ್ಣ ಚೇತರಿಕೆಯ ಮುನ್ಸೂಚನೆಯು ನಾಲ್ಕು ಅಂಶಗಳನ್ನು ಆಧರಿಸಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ. ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಚೀನಾದ ಯಶಸ್ಸು, ದೇಶೀಯ ವಾಯುಯಾನ ಆಸನ ಸಾಮರ್ಥ್ಯವು ಆಗಸ್ಟ್ ಕೊನೆಯ ವಾರದಲ್ಲಿ ಶೇ.5.7ರಷ್ಟು ಏರಿಕೆಯಾಗಲಿದೆ. ವರ್ಷದಲ್ಲಿ ಶಾಲಾ ಪ್ರಾರಂಭ ಮತ್ತು ಆಕ್ರಮಣಕಾರಿ ಬೆಲೆ ಪ್ರಚಾರಗಳು ಎಂದು ಉಲ್ಲೇಖಿಸಿದೆ. ಚೀನಾದ ವಾಯುಯಾನ ಮಾರುಕಟ್ಟೆ ಫೆಬ್ರವರಿ 2ನೇ ವಾರದಲ್ಲಿ ತೀವ್ರ ಕುಸಿಯಿತು. ಅಂದಿನಿಂದ ನಿಧಾನವಾಗಿ ಏರಿತ್ತಾ ಸಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಹುಬೈ ಪ್ರಾಂತ್ಯದ ಪ್ರಾಂತೀಯ ರಾಜಧಾನಿ ವುಹಾನ್‌ನಲ್ಲಿ ಕೊರೊನಾ ವೈರಸ್ ಪ್ರಥಮ ಬಾರಿಗೆ ಕಂಡು ಬಂದಿತ್ತು.
ಅಂದಿನಿಂದ ಈ ವೈರಸ್ ಪ್ರಪಂಚದಾದ್ಯಂತ ಹರಡುತ್ತಾ ಸಾಗುತ್ತಿದೆ. ಈವರೆಗೆ ಒಟ್ಟು 24,646,610 ಜನರಿಗೆ ಸೋಂಕು ತಗುಲಿದೆ. ಜಾಗತಿಕವಾಗಿ 8,35,730 ಜನರನ್ನು ಬಲಿತೆಗೆದುಕೊಂಡಿದೆ.