ಬೆಂಗಳೂರು:ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ಓಲಾ ಕ್ಯಾಬ್ ಸೇವೆ ಇಂದಿನಿಂದ ಮತ್ತೆ ಬೆಂಗಳೂರಿನಲ್ಲಿ ಆರಂಭವಾಗಿದೆ. ಆದರೆ, ಇವುಗಳು ಪ್ರಯಾಣಿಕರ ಸೇವೆಯ ಬದಲು ಕೋವಿಡ್-19 ಹಾಗೂ ಇತರೆ ತುರ್ತು ಆರೋಗ್ಯ ಸೇವೆಗಳಿಗೆ ಲಭ್ಯವಾಗಲಿವೆ.
ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ಅಡಿ 'ಓಲಾ ಎಮರ್ಜೆನ್ಸಿ' ಸೇವೆ ಆರಂಭಿಸುವುದಾಗಿ ಸ್ಟಾರ್ಟ್ಅಪ್ ಕಂಪನಿ ಘೋಷಿಸಿದೆ. ಆಂಬ್ಯುಲೆನ್ಸ್ ಅಗತ್ಯವಿಲ್ಲದೇ ವೈದ್ಯಕೀಯ ಪ್ರಯಾಣಗಳನ್ನು 200ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಒದಗಿಸಲಿದೆ. ಕರ್ನಾಟಕ ಆರೋಗ್ಯ ಸಚಿವಾಲಯದ ಸಹಯೋಗದೊಂದಿಗೆ ಸೇವೆ ಆರಂಭಿಸಲಾಗಿದ್ದು, ಕಂಪನಿಯು ಶೀಘ್ರದಲ್ಲೇ ಇತರ ಪ್ರಮುಖ ನಗರಗಳಲ್ಲಿ ಈ ಸೇವೆ ವಿಸ್ತರಿಸಲಿದೆ.
ಓಲಾ ಎಮರ್ಜೆನ್ಸಿ ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಿದ್ದು, ಮುಖಗವಸು ಮತ್ತು ಸ್ಯಾನಿಟೈಸರ್‌ಗಳು ಕಾರುಗಳಲ್ಲಿ ಲಭ್ಯ ಇರಲಿವೆ. ವಿಶೇಷ ತರಬೇತಿ ಪಡೆದ ಚಾಲಕರು ಇವುಗಳನ್ನು ನಿರ್ವಹಿಸಲಿದ್ದಾರೆ ಎಂದು ಓಲಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಓಲಾ ಎಮರ್ಜೆನ್ಸಿ ಕ್ಯಾಬ್ ಬುಕ್ ಮಾಡಲು ಬಳಕೆದಾರರ ಓಲಾ ಅಪ್ಲಿಕೇಷನ್‌ನಲ್ಲಿ 'ಆಸ್ಪತ್ರೆ ಸೇವೆ' ಆಯ್ಕೆ ಕೊಡಲಾಗಿದೆ. ನಗರದಲ್ಲಿ ಲಭ್ಯವಿರುವ ಆಸ್ಪತ್ರೆಗಳ ಪಟ್ಟಿಯಿಂದ ಡ್ರಾಪ್ ಸ್ಥಳವನ್ನು ನಮೂದಿಸಿ ಪ್ರಯಾಣಿಸಬಹುದು ಎಂದಿದೆ.
ಓಲಾ ತನ್ನ ಅಪ್ಲಿಕೇಷನ್‌ನಲ್ಲಿ 200ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಈ ಸೇವೆಯನ್ನು ಒದಗಿಸಲಿದೆ. ಕ್ಯಾಬ್‌ಗಳನ್ನು ಅಗತ್ಯ ವೈದ್ಯಕೀಯ ಪ್ರಯಾಣಕ್ಕಾಗಿ ಮಾತ್ರ ಬಳಸಲಾಗಿದೆಯೇ ಎಂಬುದನ್ನು ಖಚಿತಪಡಿಸುತ್ತೇವೆ. ಈ ಸೇವೆ ಬೆಂಗಳೂರಿನಾದ್ಯಂತ ಲಭ್ಯವಿರುತ್ತದೆ. ಶೀಘ್ರದಲ್ಲೇ ಇತರ ಪ್ರಮುಖ ನಗರಗಳಲ್ಲಿ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.