ನವದೆಹಲಿ:ಎರಡೇ ದಿನಗಳಲ್ಲಿ ಓಲಾ ಸಂಸ್ಥೆ 1,100 ಕೋಟಿ ರೂ. ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು(Electric scooters) ಮಾರಾಟ ಮಾಡಿರುವುದಾಗಿ ಓಲಾ ಸಂಸ್ಥೆ ಸಹ ಸಂಸ್ಥಾಪಕ ಭವೀಶ್ ಅಗರ್ವಾಲ್ ಹೇಳಿದ್ದಾರೆ.
ಓಲಾ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆಯನ್ನು ಈಗ ನಿಲ್ಲಿಸಿದರೂ, ದೀಪಾವಳಿ ಸಮಯಕ್ಕೆ ಪುನಃ ಮಾರಾಟ ಆರಂಭಿಸುವುದಾಗಿ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಬುಧವಾರದಿಂದ ಗುರುವಾರ ಮಧ್ಯರಾತ್ರಿವರೆಗೆ ಓಲಾ ಸ್ಕೂಟರ್ ಬುಕ್ ಮಾಡಲು ಕಂಪನಿ ಕಾಲಾವಕಾಶ ನೀಡಿತ್ತು. ಈ ಹಿಂದೆ ಓಲಾದ ಈ ಸ್ಕೂಟರ್ ಸೆಪ್ಟೆಂಬರ್ 8ರಂದು ಮಾರಾಟಕ್ಕೆ ಲಭ್ಯವಾಗುತ್ತದೆಂದು ಸಂಸ್ಥೆ ತಿಳಿಸಿತ್ತು. ಆದರೆ ತಾಂತ್ರಿಕ ದೋಷದ ಕಾರಣ ಸೆಪ್ಟೆಂಬರ್15 ಕ್ಕೆ ಮುಂದೂಡಲಾಗಿತ್ತು.
ಎರಡು ದಿನಗಳಲ್ಲಿ 1,100 ಕೋಟಿ ರೂ.ಮೌಲ್ಯದ ವಾಹನಗಳನ್ನು ಮಾರಾಟ ಮಾಡಿದ್ದೇವೆ. ನವೆಂಬರ್ 1 ರಿಂದ ಮತ್ತೆ ವಾಹನಗಳನ್ನು ಮಾರುತ್ತೇವೆ. ನೀವು ಈಗಲೇ ಬುಕ್ ಮಾಡಿ ಎಂದು ಅಗರ್ವಾಲ್ ಟ್ವೀಟ್ ಮಾಡಿದ್ದಾರೆ.
ಎರಡು ದಿನಗಳಲ್ಲಿ 1,100 ಕೋಟಿ ರೂ ಮೌಲ್ಯದ ವಾಹನಗಳನ್ನು ಮಾರಾಟ ಮಾಡುವುದು ಸುಲಭದ ಮಾತಲ್ಲ. ಇದು ಕೇವಲ ಉದ್ಯಮ ಮಾತ್ರವಲ್ಲ. ಭಾರತೀಯ ಇ-ಕಾಮರ್ಸ್ನಲ್ಲಿ ಒಂದೇ ಉತ್ಪನ್ನ ಅಧಿಕವಾಗಿ ಮಾರಾಟವಾಗಿದ್ದು, ಇತಿಹಾಸ ನಿರ್ಮಿಸಿದೆ. ನಾವು ನಿಜವಾಗಿಯೂ ಡಿಜಿಟಲ್ ಭಾರತದಲ್ಲಿ ಬದುಕುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಸ್ವಿಗ್ಗಿ,ಜೊಮ್ಯಾಟೊ GST ಪಾವತಿಸಬೇಕು: ಆದ್ರೆ, ಆರ್ಡರ್ ಮಾಡುವ ಗ್ರಾಹಕರಿಗಿಲ್ಲ ತೊಂದರೆ
ಗ್ರಾಹಕರು ಓಲಾ ಇ- ಸ್ಕೂಟರ್ ಅನ್ನು ಓಲಾ ಆ್ಯಪ್ ಮೂಲಕವೇ ಬುಕ್ ಮಾಡಬೇಕು. ಬುಕ್ ಮಾಡುವಾಗ ಗ್ರಾಹಕರು 20,000 ರೂ. ಮುಂಗಡ ಹಣ ಪಾವತಿಸಬೇಕು. ಆರ್ಡರ್ ಪ್ರಕಾರ ಸರದಿಯಂತೆ ಅಕ್ಟೋಬರ್ ನಂತರ ಇ ಸ್ಕೂಟರ್ ಡೆಲಿವರಿ ಪ್ರಾರಂಭಗೊಳ್ಳಲಿದೆ. ಬುಕ್ ಮಾಡಿದ 72 ಗಂಟೆಗಳ ನಂತರ ಗ್ರಾಹಕರಿಗೆ ಸ್ಕೂಟರ್ ಯಾವಾಗ ಡೆಲಿವರಿ ಮಾಡಲಾಗುವುದು ಎನ್ನುವ ಸಂದೇಶವನ್ನು ಸಂಸ್ಥೆಯು ಗ್ರಾಹಕರಿಗೆ ಕಳಿಸುತ್ತದೆ.