ಕರ್ನಾಟಕ

karnataka

ETV Bharat / business

ಐಟಿ ಕಂಪನಿ ವಿಪ್ರೋ ದಾಖಲೆ, ಇನ್ಫೋಸಿಸ್​ ಷೇರುಗಳ ಮೌಲ್ಯ ಏರಿಕೆ - ವಿಪ್ರೋ ಶೇರುಗಳಲ್ಲಿ ಏರಿಕೆ

ದೇಶದ ಎರಡು ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್ ಮತ್ತು ವಿಪ್ರೋ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಅದರಲ್ಲೂ ವಿಪ್ರೋ ಕಂಪನಿ ತ್ರೈಮಾಸಿಕದಲ್ಲಿ ಲಾಭ ಗಳಿಸಿದ ಹಿನ್ನೆಲೆಯಲ್ಲಿ ತನ್ನ ಷೇರು ಬೆಲೆಗಳಲ್ಲಿ ದಾಖಲೆಯ ಏರಿಕೆಯನ್ನು ಕಂಡಿದೆ.

Wipro shares climb nearly 8 pc post Q2 earnings
ಐಟಿ ಕಂಪನಿ ವಿಪ್ರೋ ದಾಖಲೆ, ಇನ್ಫೋಸಿಸ್​ ಷೇರುಗಳ ಮೌಲ್ಯ ಏರಿಕೆ

By

Published : Oct 14, 2021, 1:51 PM IST

ನವದೆಹಲಿ:ಬಾಂಬೆ ಷೇರು ಮಾರುಕಟ್ಟೆಯಲ್ಲಿ ಐಟಿ ಕಂಪನಿಯಾದ ವಿಪ್ರೋ ಕಂಪನಿಯ ಷೇರುಗಳ ಮೌಲ್ಯ ಏರಿಕೆಯಾಗಿದೆ. ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 17ರಷ್ಟು ನಿವ್ವಳ ಲಾಭ ಏರಿಕೆಯಾದ ನಂತರ ಆ ಕಂಪನಿಯ ಷೇರುಗಳ ಬೆಲೆ ಶೇಕಡಾ 8ರಷ್ಟು ಏರಿಕೆ ಕಂಡುಬಂದಿದೆ.

ಬಾಂಬೆ ಷೇರು ಮಾರುಕಟ್ಟೆಯಲ್ಲಿ ಶೇಕಡಾ 7.59ರಷ್ಟು ಏರಿಕೆ ಕಂಡಿದ್ದು, ಷೇರಿನ ಬೆಲೆ 723.65 ರೂಪಾಯಿಗೆ ಏರಿಕೆಯಾಗಿದೆ. ಇದು 52 ವಾರಗಳಲ್ಲಿ ಅತ್ಯಂತ ದಾಖಲೆಯ ಮಟ್ಟದ ಏರಿಕೆಯಾಗಿದೆ. ಅದರಂತೆ ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಶೇಕಡಾ 7.62ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ 723.90 ರೂಪಾಯಿಗೆ ತಲುಪಿದೆ. ಇದೂ ಕೂಡಾ 52 ವಾರಗಳಲ್ಲಿ ದಾಖಲೆಯ ಏರಿಕೆಯಾಗಿದೆ.

ಈ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇಕಡಾ 17ರಷ್ಟು ಏರಿಕೆಯಾಗಿದ್ದು, 2,930.6 ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ ಎಂದು ಕಂಪನಿ ಘೋಷಣೆ ಮಾಡಿದೆ. ಇದೇ ತ್ರೈಮಾಸಿಕದಲ್ಲಿ ಹಿಂದಿನ ವರ್ಷ 2,484.4 ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ ಎಂದು ವಿಪ್ರೋ ಘೋಷಿಸಿತ್ತು.

ಇದರ ಜೊತೆಗೆ ವಾರ್ಷಿಕವಾಗಿ 10 ಬಿಲಿಯನ್ ಡಾಲರ್ ಆದಾಯ ಮೀರಿದೆ. ಮುಂದಿನ ಹಣಕಾಸು ವರ್ಷದಲ್ಲಿ ಸುಮಾರು 25 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.

ಇನ್ಫೋಸಿಸ್​​​ ಷೇರು ದರಗಳಲ್ಲೂ ಏರಿಕೆ

ಮತ್ತೊಂದು ಐಟಿ ಕಂಪನಿ ಇನ್ಫೋಸಿಸ್​ನ ಷೇರುಗಳ ಬೆಲೆ ಏರಿಕೆ ಕಂಡಿದೆ. ಬಾಂಬೆ ಷೇರು ಮಾರುಕಟ್ಟೆಯಲ್ಲಿ ಷೇರಿನ ಬೆಲೆ ಶೇಕಡಾ 4.40ರಷ್ಟು ಏರಿಕೆ ಕಂಡಿದ್ದು, ಪ್ರಸ್ತುತ ಷೇರಿನ ಬೆಲೆ 1,784.05 ರೂಪಾಯಿಗೆ ಏರಿಕೆಯಾಗಿದೆ. ಇದೇ ರೀತಿಯಲ್ಲಿ ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ (NSE) ಶೇಕಡಾ 4.35ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ 1,783.60 ರೂಪಾಯಿ ತಲುಪಿದೆ.

ಜುಲೈನಿಂದ ಸೆಪ್ಟೆಂಬರ್ ವರೆಗಿನ ತ್ರೈಮಾಸಿಕದಲ್ಲಿ ಇನ್ಫೋಸಿಸ್ 5,421 ಕೋಟಿ ರೂಪಾಯಿ ಗಳಿಸಿದೆ. ಹಿಂದಿನ ವರ್ಷ ಇದೇ ವೇಳೆ 4,845 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಇನ್ಫೋಸಿಸ್ ಗಳಿಸಿತ್ತು.

ಇದನ್ನೂ ಓದಿ:ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿಯ ಯೋಜನೆಗಳು ಮತ್ತು ಮಾನದಂಡಗಳೇನು?

ABOUT THE AUTHOR

...view details