ನವದೆಹಲಿ: ಅಮೆರಿಕದ ಟೆಕ್ ದೈತ್ಯ ಕಂಪನಿಗಳಾದ ಗೂಗಲ್ ಮತ್ತು ಫೇಸ್‌ಬುಕ್‌ನಿಂದ ಸಂಗ್ರಹಿಸಿದ ಡಿಜಿಟಲ್ ಸೇವಾ ತೆರಿಗೆಗೆ ಪ್ರತೀಕಾರವಾಗಿ ಆಮದು ಮಾಡಿಕೊಳ್ಳುವ 2 ಬಿಲಿಯನ್ ಡಾಲರ್ ಮೌಲ್ಯದ ಸರಕು ಮತ್ತು ಸೇವೆಗಳಿಗೆ ಶೇ. 25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಬುಧವಾರ ಪ್ರಕಟಿಸಿದೆ.
ಆಸ್ಟ್ರಿಯಾ, ಭಾರತ, ಇಟಲಿ, ಸ್ಪೇನ್, ಟರ್ಕಿ ಮತ್ತು ಇಂಗ್ಲೆಂಡ್ ಅಳವಡಿಸಿಕೊಂಡ ಡಿಜಿಟಲ್ ಸೇವಾ ತೆರಿಗೆ ನೀತಿಗಳಿಗೆ ಪ್ರತಿಯಾಗಿ ಅಮೆರಿಕ ಸುಂಕದ ಸಮರ ಹೂಡಿದೆ ಎಂದು ಅಮೆರಿಕ ವ್ಯಾಪಾರ ಪ್ರತಿನಿಧಿಗಳ ಕಚೇರಿ (ಯುಎಸ್‌ಟಿಆರ್) ಪ್ರಕಟಣೆಯಲ್ಲಿ ತಿಳಿಸಿದೆ.
ಯುಎಸ್‌ಟಿಆರ್ ತಕ್ಷಣವೇ ಆರು ತಿಂಗಳವರೆಗೆ ಸುಂಕವನ್ನು ಸ್ಥಗಿತಗೊಳಿಸಿತು. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಸಿಇಡಿ) ಮತ್ತು ಜಿ-20ಯಲ್ಲಿ ಬಾಕಿ ಇರುವ ಅಂತಾರಾಷ್ಟ್ರೀಯ ಮಾತುಕತೆಗಳನ್ನು ತೀರ್ಮಾನಿಸಲು ಅವಕಾಶ ಮಾಡಿಕೊಟ್ಟಿತು.
ಯುಎಸ್ ಟೆಕ್ ಕಂಪನಿಗಳಾದ ಗೂಗಲ್, ಫೇಸ್‌ಬುಕ್, ಟ್ವಿಟರ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್ ವಿರುದ್ಧ ಈ ಆರು ರಾಷ್ಟ್ರಗಳು ವಿಧಿಸಿರುವ ಡಿಜಿಟಲ್ ಸೇವಾ ತೆರಿಗೆಯ ಬಗ್ಗೆ ಒಂದು ವರ್ಷದ ಸುದೀರ್ಘ ಚರ್ಚೆ ನಡೆಸಿ ಅಂತಿಮವಾಗಿ ಅನುಷ್ಠಾನಕ್ಕೆ ಬಂದಿದೆ. ಯುಎಸ್‌ಟಿಆರ್ ಡಿಜಿಟಲ್ ತೆರಿಗೆ ವಿಧಿಸುವುದು ಯುಎಸ್ ಕಂಪನಿಗಳ ವಿರುದ್ಧ ತಾರತಮ್ಯವಾಗಿದೆ ಎಂದು ಹೇಳಿದೆ.