ಮುಂಬೈ: ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ 1,861 ಅಂಶಗಳಷ್ಟು ಏರಿಕೆ ದಾಖಲಿಸಿದೆ.
ಎಸ್ ಆ್ಯಂಡ್ ಪಿ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ ಮಧ್ಯಾಹ್ನದ ನಂತರದ ಅವಧಿಯಲ್ಲಿ 2,000 ಅಂಶಗಳು ಏರಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 50 ಬೆಂಚ್ಮಾರ್ಕ್ 8,300 ಅಂಶಗಳಿಗೂ ಅಧಿಕಮಟ್ಟದಲ್ಲಿ ವಹಿವಾಟು ನಡೆಸಿರುವುದು ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿತು.
ಕೊರೊನಾ ವೈರಸ್ ಬಗ್ಗೆ ಕೇಂದ್ರ ಸರ್ಕಾರ ನಿನ್ನೆ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ರಿಲಯನ್ಸ್ ಇಂಡಸ್ಟ್ರೀಸ್, ಹೆಚ್ಡಿಎಫ್ಸಿ, ಐಸಿಐಸಿಐ ಹಾಗೂ ಕೋಟ್ಯಾಕ್ ಬ್ಯಾಂಕ್ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.
ದಿನದ ಅಂತ್ಯಕ್ಕೆ ಮುಂಬೈ ಷೇರುಪೇಟೆಯ ಸೂಚ್ಯಂಕ ಸೆನ್ಸೆಕ್ಸ್ 1,861.75 ಅಂಶಗಳ ಏರಿಕೆಯೊಂದಿಗೆ 18,535.78 ಮಟ್ಟದಲ್ಲಿ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 516.80 ಅಂಶಗಳ ಜಿಗಿತದೊಂದಿಗೆ 8,317.85 ಅಂಶಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್, ನೆಸ್ಲೆ ಇಂಡಿಯಾ, ಟೆಕ್ ಮಹೀಂದ್ರಾ, ಎಚ್ಡಿಎಫ್ಸಿ, ಪವರ್ ಗ್ರಿಡ್ ಮತ್ತು ಎಚ್ಯುಎಲ್ ದಿನದ ಟಾಪ್ಗೇನರ್ಗಳಾದರು. ಇಂಡಸ್ಲ್ಯಾಂಡ್ ಬ್ಯಾಂಕ್, ಐಟಿಸಿ, ಎಲ್ ಆ್ಯಂಡ್ ಟಿ ಹಾಗೂ ಐಸಿಐಸಿಐ ಬ್ಯಾಂಕ್ ಷೇರು ಕುಸಿತಕಂಡವು.
ನ್ಯೂಯಾರ್ಕ್ ಹಾಗೂ ಯುರೋಪ್ ಮಾರುಕಟ್ಟೆಗಳು ಏರಿಕೆಯ ಪರ್ವ ಮತ್ತೆ ಮರುಕಳಿಸಿತು. ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ವಿಶ್ವದ ಅಗ್ರ ಆರ್ಥಿಕ ರಾಷ್ಟ್ರಗಳು ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದವು. ಇದು ಮಾರುಕಟ್ಟೆಗಳ ಉತ್ತೇಜನೆಗೆ ಕಾರಣವಾಯಿತು. ಟೊಕಿಯೋ, ಹಾಂಗ್ಕಾಂಗ್, ಸಿಡ್ನಿ, ಸಿಂಗಪುರ್ ಹಾಗೂ ವೆಲಿಂಟನ್ ಪೇಟೆಗಳು ಏರಿಕೆ ಕಂಡವು.