ಮುಂಬೈ:ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 99,122 ಕೋಟಿ ರೂ. ವರ್ಗಾವಣೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನುಮೋದನೆ ನೀಡಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೇಂದ್ರ ನಿರ್ದೇಶಕರ ಸಭೆಯಲ್ಲಿ ಸೆಂಟ್ರಲ್ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ.
2020ರ ಜುಲೈನಿಂದ 2021ರ ಮಾರ್ಚ್ ಅವಧಿಯ ಒಂಬತ್ತು ತಿಂಗಳಿಗೆ ರಿಸರ್ವ್ ಬ್ಯಾಂಕಿನ ವಾರ್ಷಿಕ ವರದಿ ಮತ್ತು ಖಾತೆಗಳನ್ನು ಅನುಮೋದಿಸುವುದರ ಜೊತೆಗೆ, 2021ರ ಮಾರ್ಚ್ 31ಕ್ಕೆ ಕೊನೆಗೊಂಡ ಒಂಬತ್ತು ತಿಂಗಳ ಲೆಕ್ಕಪತ್ರದ ಅವಧಿಗೆ ಕೇಂದ್ರ ಸರ್ಕಾರಕ್ಕೆ 99,122 ಕೋಟಿ ರೂ. ಹೆಚ್ಚುವರಿ ಹಣ ವರ್ಗಾವಣೆ ಮಾಡಲು ಮಂಡಳಿ ಅನುಮೋದಿಸಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಆಕಸ್ಮಿಕ ಅಪಾಯದ ಬಫರ್ ಅನ್ನು ಶೇ 5.50ಕ್ಕೆ ಉಳಿಸಿಕೊಂಡು ಈ ಮೊತ್ತವನ್ನು ವರ್ಗಾಯಿಸಲು ಕೇಂದ್ರ ಬ್ಯಾಂಕ್ ನಿರ್ಧರಿಸಿದೆ. ಪ್ರಸ್ತುತ ದೇಶೀಯ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಂಡಳಿಯು ತನ್ನ ಸಭೆಯಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜಾಗತಿಕ ಮತ್ತು ದೇಶೀಯ ಸವಾಲುಗಳು ಹಾಗೂ ರಿಸರ್ವ್ ಬ್ಯಾಂಕ್ ಆರ್ಥಿಕತೆಯ ಮೇಲೆ ಎರಡನೇ ಅಲೆಯ ಕೋವಿಡ್-19ನ ದುಷ್ಪರಿಣಾಮ ತಗ್ಗಿಸಲು ತೆಗೆದುಕೊಂಡ ಇತ್ತೀಚಿನ ನೀತಿ ಕ್ರಮಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದೆ.