ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಬಿಡುಗಡೆ ಮಾಡಿದ್ದಾರೆ. ಗುಜರಾತ್ನಲ್ಲಿ ನಡೆಯುತ್ತಿರುವ ಹೂಡಿಕೆದಾರರ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಈ ನೀತಿ ಪ್ರಕಟಿಸಿದ್ದಾರೆ.
ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಯಾವುದೇ ದೇಶದ ಆರ್ಥಿಕತೆಯಲ್ಲಿ ಚಲನಶೀಲತೆ ದೊಡ್ಡ ಪಾತ್ರ ವಹಿಸುತ್ತದೆ. ಹೊಸ ಸ್ಕ್ರ್ಯಾಪೇಜ್ ಪಾಲಿಸಿ ಆರ್ಥಿಕತೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಪುನರ್ಬಳಕೆ, ರಿ-ಸೈಕಲ್ ಈ ನೀತಿಯ ಪ್ರಮುಖ ಉದ್ದೇಶ. ಈ ನೀತಿಯು ದೇಶದಲ್ಲಿ 10,000 ಕೋಟಿ ರೂಪಾಯಿಗಳ ಹೂಡಿಕೆ ಆಕರ್ಷಿಸಲಿದೆ. ಹೆದ್ದಾರಿ ನಿರ್ಮಾಣದಲ್ಲಿ ಭಾರತ ತ್ಯಾಜ್ಯ ಉತ್ಪನ್ನ ಬಳಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಮಾರಂಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಉಪಸ್ಥಿತರಿದ್ದರು.
ಈ ನೀತಿಯನ್ನು ಪ್ರಚಲಿತಗೊಳಿಸಲು ಸರ್ಕಾರ ಇದರಡಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಉದಾಹರಣೆಗೆ ಹಳೆ ಕಾರನ್ನು ಸ್ಕ್ರ್ಯಾಪ್‌ಗೆ ನೀಡುವ ಮಾಲೀಕರಿಗೆ ಒಂದು ಸರ್ಟಿಫಿಕೇಟ್ ನೀಡಲಾಗುವುದು. ಹೊಸ ಕಾರು ಖರೀದಿಯ ವೇಳೆ ಅವರು ಈ ಸರ್ಟಿಫಿಕೇಟ್ ಅನ್ನು ತೋರಿಸುವ ಮೂಲಕ ನೋಂದಣಿ ಶುಲ್ಕದಿಂದ ಮುಕ್ತಿ ಪಡೆಯಬಹುದು.