ಕರ್ನಾಟಕ

karnataka

ETV Bharat / business

ಹೋಬಳಿ ಮಟ್ಟದ ಎಲ್ಲ ಸರ್ಕಾರಿ ಆಸ್ಪತ್ರೆ ಬಳಿ ಜನೌಷಧ ಮಳಿಗೆ ತೆರೆಯುತ್ತೇವೆ: ಸದಾನಂದ ಗೌಡ

ಆರ್ಥಿಕ ದುರ್ಬಲರಿಗಾಗಿಯೇ ಆರಂಭಿಸಲಾಗಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ. ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನೌಷಧ ಮಾರಾಟ ಶೇ 73ರಷ್ಟು ವೃದ್ಧಿಯಾಗಿದೆ. ರಾಜ್ಯದಲ್ಲಿ 2020-21ರ ಹಣಕಾಸು ವರ್ಷದಲ್ಲಿ 125 ಕೋಟಿ ರೂ. ಮೌಲ್ಯದ ಜನೌಷಧ ಮಾರಾಟದ ಗುರಿ ಹೊಂದಲಾಗಿದ್ದು, ಕಳೆದ ಆರು ತಿಂಗಳಲ್ಲಿ 65 ಕೋಟಿ ರೂ. ವಹಿವಾಟು ನಡೆಸಲಾಗಿದೆ ಎಂದರು.

jan aushadhi
ಜನೌಷಧಿ

By

Published : Oct 10, 2020, 9:54 PM IST

ಬೆಂಗಳೂರು: ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಗಳನ್ನು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ ಜನೌಷಧ ಕೇಂದ್ರ ಯೋಜನೆಯಿಂದಾಗಿ ಕರ್ನಾಟಕದಲ್ಲಿ ಸಾಮಾನ್ಯ ಜನರಿಗೆ ಈ ವರ್ಷ 500 ಕೋಟಿ ರೂ.ಯಷ್ಟು ಉಳಿತಾಯವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ರಾಜ್ಯದಲ್ಲಿನ ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆಯ ಕೇಂದ್ರಗಳ ಕಾರ್ಯನಿರ್ವಹಣೆಯ ಪರಿಶೀಲನಾ ಸಭೆ ನಡೆಸಿ, ಯೋಜನೆಯ ಪ್ರಗತಿಯನ್ನು ವಿವರಿಸಿದರು.

ಆರ್ಥಿಕ ದುರ್ಬಲರಿಗಾಗಿಯೇ ಆರಂಭಿಸಲಾಗಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ. ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನೌಷಧ ಮಾರಾಟ ಶೇ 73ರಷ್ಟು ವೃದ್ಧಿಯಾಗಿದೆ. ರಾಜ್ಯದಲ್ಲಿ 2020-21ರ ಹಣಕಾಸು ವರ್ಷದಲ್ಲಿ 125 ಕೋಟಿ ರೂ. ಮೌಲ್ಯದ ಜನೌಷಧ ಮಾರಾಟದ ಗುರಿ ಹೊಂದಲಾಗಿದ್ದು, ಕಳೆದ ಆರು ತಿಂಗಳಲ್ಲಿ 65 ಕೋಟಿ ರೂ. ವಹಿವಾಟು ನಡೆಸಲಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಜನೌಷಧ ಕೇಂದ್ರಗಳು ಗುರಿಮೀರಿ ವಹಿವಾಟು ನಡೆಸಿವೆ ಪ್ರಸಂಶಿದರು.

ಖಾಸಗಿ ಔಷಧ ಅಂಗಡಿಗಳು ಮಾರಾಟ ಮಾಡುವ ಬ್ರಾಂಡೆಡ್‌ ಔಷಧಗಳ ಬೆಲೆಗೆ ಹೋಲಿಸಿದರೆ ಕೇಂದ್ರಗಳಲ್ಲಿ ದೊರಕುತ್ತಿರುವ ಔಷಧಗಳ ಬೆಲೆ ಸರಾಸರಿ ನಾಲ್ಕರಿಂದ ಐದು ಪಟ್ಟು ರಿಯಾಯಿತಿ ದರದಲ್ಲಿದೆ. ಕರ್ನಾಟಕದಲ್ಲಿ ವಾರ್ಷಿಕವಾಗಿ ಮಾರಾಟವಾಗುವ ಜನೌಷಧ ಮೌಲ್ಯ ಅಂದಾಜು 125 ಕೋಟಿ ರೂ. ಜನೌಷಧ ಕೇಂದ್ರಗಳಿಂದ ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ಔಷಧಗಳು ದೊರಕುತ್ತಿದೆ. ಈ ಮುನ್ನ ಜನರು ಸಂಪೂರ್ಣವಾಗಿ ಖಾಸಗಿ ಔಷಧ ಅಂಗಡಿಗಳ ಮೇಲೆ ಅವಲಂಬಿತರಾಗಿದ್ದರು. ಇದರಿಂದಾಗಿ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಜನೌಷಧ ಕೇಂದ್ರಗಳಲ್ಲಿ ಗುಣಮಟ್ಟದ ಔಷಧಿಗಳು ರಿಯಾಯಿತಿದಲ್ಲಿ ದೊರಕುತ್ತಿದ್ದು, ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಅವುಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ ಸಚಿವರು ಸ್ಪಷ್ಟಪಡಿಸಿದರು.

ಕರ್ನಾಟಕದ ಮೊದಲ ಜನೌಷಧ ಕೇಂದ್ರವು ಮೈಸೂರಿನಲ್ಲಿ 2015ರ ನವೆಂಬರ್‌ 10ರಂದು ಆರಂಭವಾಗಿತ್ತು. ರಾಜ್ಯದಲ್ಲಿ ಇಂದು 705 ಜನೌಷಧ ಕೇಂದ್ರಗಳಿವೆ. ಪ್ರತಿವರ್ಷವೂ ನೂರಕ್ಕಿಂತ ಹೆಚ್ಚು ಹೊಸ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

ಮುಂದೆ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇರುವ ಎಲ್ಲ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಬಳಿ ಜನೌಷಧ ಕೇಂದ್ರಗಳನ್ನು ತೆರೆಯಲಾಗುವುದು. ಜನೌಷಧ ಕೇಂದ್ರಗಳನ್ನು ಆರಂಭಿಸಿ ಸಾಮಾನ್ಯ ಬಡಜನರಿಗೂ ಕೈಗೆಟುಕುವ ದರದಲ್ಲಿ ಔಷಧ ಸಿಗುವಂತಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಈ ಯೋಜನೆಯ ಅನುಷ್ಠಾನಗೊಳಿಸುವ ಸಂಸ್ಥೆ ಬಿಪಿಪಿಐ ಕರ್ನಾಟಕ ಸರ್ಕಾರದೊಂದಿಗೆ 200 ಜನೌಷಧ ಕೇಂದ್ರ ತೆರೆಯುವ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಪೈಕಿ ಎಂ.ಎಸ್.ಐ.ಎಲ್‌. 85, ರೆಡ್ ಕ್ರಾಸ್‌ ಸೊಸೈಟಿ ಮತ್ತಿತರರು 33 ಜನೌಷಧಿ ಕೇಂದ್ರಗಳನ್ನು ತೆರೆದಿದ್ದಾರೆ. ಇನ್ನುಳಿದ ಕೇಂದ್ರಗಳನ್ನೂ ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ಜನೌಷಧ ಕೇಂದ್ರಗಳಲ್ಲಿ ಗುಣಮಟ್ಟದ 825 ಬಗೆಯ ಔಷಧಗಳು 122 ನಮೂನೆ ಸರ್ಜಿಕಲ್ ಸಾಧನಗಳು ಲಭ್ಯವಿವೆ. ಕೇವಲ ಒಂದು ರೂಪಾಯಿಗೆ 'ಸುವಿಧಾ' ಹೆಸರಿನಲ್ಲಿ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡಲಾಗುತ್ತಿದೆ.

ಜನೌಷಧಿ ಪರಿಶೀಲನಾ ಸಭೆಯಲ್ಲಿ ಸಚಿವರು ʼಸುವಿಧಾʼ ಸ್ಯಾನಿಟರಿ ಪ್ಯಾಡ್ ಗಳನ್ನು ಮಾರಾಟ ಜನಪ್ರಿಯಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜನೌಷಧ ಕೇಂದ್ರಗಳ ಕಾರ್ಯಕ್ಷಮತೆ ಹೆಚ್ಚಿಸಿ, ಸಾಮಾನ್ಯ ಜನರಿಗೆ ಉತ್ತಮ ಸೇವೆ ನೀಡುವಂತೆ ಸಲಹೆ ಮಾಡಿದರು.

ಕೆಎಪಿಎಲ್‌: ಸಾರ್ವಜನಿಕ ವಲಯದ ಉದ್ಯಮ ಕರ್ನಾಟಕ ಆಂಟಿಬಯೋಟಿಕ್ಸ್‌ ಮತ್ತು ಫಾರ್ಮಾಸ್ಯುಟಿಕಲ್ಸ್‌ ಲಿಮಿಟೆಡ್‌ನ (ಕೆಎಪಿಎಲ್) ಅಧಿಕಾರಗಳ ಜತೆ ಸಂಸ್ಥೆಯ ಉತ್ಪಾದನೆ, ಮಾರಾಟ, ರಫ್ತು, ತಾಂತ್ರಿಕ ಉನ್ನತೀಕರಣ ಹಾಗೂ ಕಾರ್ಯ ಕ್ಷಮತೆಯ ಬಗ್ಗೆ ಸಚಿವರು ಪರಿಶೀಲನೆ ನಡೆಸಿದರು.

ಸಂಸ್ಥೆ ಈ ಸಾಲಿನ 525 ಕೋಟಿ ರೂ ಮೌಲ್ಯದ ಔಷಧ ಉತ್ಪಾದನೆಯೊಂದಿಗೆ 500 ಕೋಟಿ ರೂ. ಮಾರಾಟ ಗುರಿಯನ್ನು ಹೊಂದಿದೆ. ಕಳೆದ ಎರಡು ತ್ರೈಮಾಸಿಕದಲ್ಲಿ ಕೆಎಪಿಎಲ್ ಸಂಸ್ಥೆ 257 ಕೋಟಿ ರೂ ಮೌಲ್ಯದ ಔಷಧ ಮಾರಾಟ ಮಾಡಿದೆ.

ABOUT THE AUTHOR

...view details