ವಾಷಿಂಗ್ಟನ್, ಅಮೆರಿಕ :ಕೊರೊನಾ ವೈರಸ್ ರೂಪಾಂತರ ಒಮಿಕ್ರೋನ್ ಭೀತಿ ಜಗತ್ತಿನಲ್ಲಿ ತಲ್ಲಣ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ತೈಲ ಬೆಲೆ ಇಳಿಯುವ ಸಾಧ್ಯತೆ ಇದ್ದರೂ, ಜನವರಿಯಿಂದ ತಿಂಗಳಿಗೆ ಇಂತಿಷ್ಟೇ ತೈಲ ಉತ್ಪಾದನೆ ಮಾಡಬೇಕೆಂಬ ನಿಯಮಕ್ಕೆ ಬದ್ಧವಾಗಿರಲು ಕಚ್ಚಾತೈಲ ಉತ್ಪಾದಿಸಿ ರವಾನಿಸುವ ಒಪೆಕ್ ಮತ್ತು ಒಪೆಕ್ ಮೈತ್ರಿಕೂಟದ ರಾಷ್ಟ್ರಗಳು ನಿರ್ಧರಿಸಿವೆ.
ಇತ್ತೀಚೆಗೆ ಭಾರತ, ಚೀನಾ ಸೇರಿದಂತೆ ಅಮೆರಿಕ ನೇತೃತ್ವದ ಕೆಲವು ರಾಷ್ಟ್ರಗಳು ತಮ್ಮಲ್ಲಿ ಮೀಸಲಿಟ್ಟಿರುವ ಕಚ್ಚಾ ತೈಲವನ್ನು ಹೊರ ತೆಗೆದು, ಒಪೆಕ್ ರಾಷ್ಟ್ರಗಳಿಂದ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಿ, ತೈಲ ಉತ್ಪಾದನೆ ಮಾಡುವ ರಾಷ್ಟ್ರಗಳಿಗೆ ಹಾಕಿದ್ದ ಬೆದರಿಕೆಗೆ ಒಪೆಕ್ ರಾಷ್ಟ್ರಗಳು ಸ್ವಲ್ಪ ಸ್ಪಂದಿಸಿವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೈಲ ಬೆಲೆ ಸಾಕಷ್ಟು ಏರಿಕೆ ಕಂಡ ಹಿನ್ನೆಲೆ ತೈಲ ಬೆಲೆ ಇಳಿಕೆ ಮಾಡುವಂತೆ ಕೆಲವು ರಾಷ್ಟ್ರಗಳು ಒಪೆಕ್ ರಾಷ್ಟ್ರಗಳಿಗೆ ಮನವಿ ಮಾಡಿದ್ದವು.
ಆದರೆ, ತೈಲ ಉತ್ಪಾದನಾ ರಾಷ್ಟ್ರಗಳು ಮನವಿ ತಿರಸ್ಕರಿಸಿದ ಕಾರಣಕ್ಕೆ ತಮ್ಮಲ್ಲಿ ತುರ್ತು ಕಾಲಕ್ಕೆ ಮೀಸಲಿಟ್ಟಿರುವ ಕಚ್ಚಾ ತೈಲವನ್ನೇ ಉಪಯೋಗಿಸಿ, ತೈಲ ಬೆಲೆ ಇಳಿಸುವಂತೆ ಒತ್ತಡ ಹೇರಿದ್ದವು. ಆದರೂ ಒಪೆಕ್ ರಾಷ್ಟ್ರಗಳು ಈಗ ತೈಲ ಬೆಲೆ ಇಳಿಕೆ ಮಾಡಲು ಒಲವು ತೋರಲಿಲ್ಲ.