ಮುಂಬೈ: ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯ ವಹಿವಾಟು ಕೂಡ ತೀವ್ರ ಕುಸಿತ ಕಂಡಿದೆ. ಹೂಡಿಕೆದಾರರ ಸಂಪತ್ತು ಬರೋಬ್ಬರಿ 4.54 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದೆ.
ದಿನದ ಆರಂಭದಲ್ಲಿ 1,319.99 ಪಾಯಿಂಟ್ (ಶೇ 2.64) ಇಳಿಕೆ ಕಂಡಿದ್ದ ಸೆನ್ಸೆಕ್ಸ್ 48,709.84 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ ಶೇಕಡಾ 2.27 ರಷ್ಟು ಕುಸಿತದೊಂದಿಗೆ 14,529.95 ಅಂಕಗಳಿಗೆ ಇಳಿಕೆಯಾಗಿದೆ.
ಬ್ಯಾಂಕಿಂಗ್ ಕಂಪನಿಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಹೆಚ್ಡಿಎಫ್ಸಿ, ಬಜಾಜ್ ಫೈನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್ ನೇತೃತ್ವದಲ್ಲಿ ಹೂಡಿಕೆ ಮಾಡಿದ್ದ 27 ಕಂಪನಿಗಳು 4.54 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿವೆ.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಕೊರೊನಾ ಕುಣಿತ: ಸೆನ್ಸೆಕ್ಸ್, ನಿಫ್ಟಿ ಕುಸಿತ
ವೇಗವಾಗಿ ಏರುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಅನೇಕ ಕ್ಷೇತ್ರಗಳಲ್ಲಿನ ಆರ್ಥಿಕ ಚಟುವಟಿಕೆ ಮೇಲೆ ಹೊಡೆತ ಬಿದ್ದಿದೆ. ಅದರಲ್ಲಿಯೂ ನಿನ್ನೆ ಒಂದೇ ದಿನ ಒಂದು ಲಕ್ಷ ಸೋಂಕಿತರು ದೇಶದಲ್ಲಿ ಪತ್ತೆಯಾಗಿರುವ ಸುದ್ದಿ ಇಂದು ಹೊರಬರುತ್ತಿದ್ದಂತೆಯೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತಕ್ಕೆ ಹೂಡಿಕೆದಾರರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.