ಹೈದರಾಬಾದ್: ಭಾರತದ ಆರ್ಥಿಕತೆಯ ಮೇಲೆ ಕೋವಿಡ್ ಬೀರುವ ಗಂಭೀರ ಪರಿಣಾಮಗಳನ್ನು ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಲ್ಲೊಂದಾದ ಕ್ರಿಸಿಲ್ (CRISIL- ಕ್ರೆಡಿಟ್ ರೇಟಿಂಗ್ ಇನ್ಫೋರ್ಮೇಷನ್ ಸರ್ವೀಸಸ್ ಆಫ್ ಇಂಡಿಯಾ ಲಿಮಿಟೆಡ್) ಬಹಿರಂಗ ಪಡಿಸಿದೆ.
ಕೊರೊನಾ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಕಾರ್ಪೊರೇಟ್ ಗಳಿಕೆ ಶೇ. 15ರಷ್ಟು ಹಾಗೂ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ. 5ಕ್ಕಿಂತಲೂ ಕಡಿಮೆಯಾಗಬಹುದು. ಅಲ್ಲದೇ ಅತಿ ಸಣ್ಣ, ಸಣ್ಣ, ಮಧ್ಯಮ ಉದ್ಯಮ ವಲಯಗಳ (MSME) ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕ್ರಿಸಿಲ್ ವರದಿ ಮಾಡಿದೆ.
ಕೇಂದ್ರ ಸರ್ಕಾರದಿಂದ 'ಆತ್ಮ ನಿರ್ಭರ' ಆರ್ಥಿಕ ಪ್ಯಾಕೇಜ್ ಘೋಷಣೆಯಾಗಿ ತಿಂಗಳು ಕಳೆಯುತ್ತಿದೆ. ಸಣ್ಣ ಉದ್ದಿಮೆದಾರರಿಗೆ ಹಣದ ಕೊರತೆ ನೀಗಿಸಲು ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಂದು ವಾರದ ಹಿಂದೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ನಿರ್ದೇಶನ ನೀಡಿದ್ದರು. ನಿಯಮಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಡಿಲಿಸುವಂತೆ ಬ್ಯಾಂಕುಗಳಿಗೆ ಸಲಹೆ ನೀಡಿದ್ದರು. ಆದರೆ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಹಣಕಾಸು ಸಚಿವಾಲಯ ವಿಫಲವಾಗಿದೆ ಎಂದು ಕ್ರಿಸಿಲ್ ಅಭಿಪ್ರಾಯಪಟ್ಟಿದೆ.
ಜಿಡಿಪಿಯ ಶೇ. 10ರಷ್ಟು ಬೆಳವಣಿಗೆಗೆ ಸಣ್ಣ ಉದ್ಯಮಗಳು ಸಹಾಯ ಮಾಡುತ್ತವೆ. ಆದರೆ ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್ನಿಂದ ಕೊರೊನಾ ಬಿಕ್ಕಟ್ಟಿನ ಮೊದಲೇ ಅಂದರೆ ಕಳೆದ ಒಂದೂವರೆ ವರ್ಷದಿಂದ ತೀವ್ರ ಒತ್ತಡದಲ್ಲಿದ್ದ ಸಣ್ಣ ಉದ್ಯಮಗಳ ಪರಿಸ್ಥಿತಿ ಸ್ಥಿರಗೊಳಿಸಲು ಸಾಧ್ಯವಾಗಿಲ್ಲ ಎಂದು ಹಣಕಾಸು ವಿಶ್ಲೇಷಣಾ ಸಂಸ್ಥೆ ಮೂಡೀಸ್ ಇನ್ವೆಸ್ಟರ್ ಸರ್ವೀಸ್ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಬಿಕ್ಕಟ್ಟನ್ನು ಅವಕಾಶವೆಂದು ಭಾವಿಸಿ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ಭಾರತದ ಅಭಿವೃದ್ಧಿ ಸಾಧಿಸೋಣ ಎಂದು ಹೇಳುತ್ತಾರೆ. ಇದೀಗ ಕನಿಷ್ಠ ಪಕ್ಷ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲು ಮುಂದಾಗಬೇಕು ಎಂಬುದು ಕ್ರಿಸಿಲ್, ಮೂಡೀಸ್ ಸಂಸ್ಥೆಗಳ ಆಗ್ರಹವಾಗಿದೆ.