ನವದೆಹಲಿ: ಸುಮಾರು 14 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳಿಗೆ ದೊಡ್ಡ ಮೊತ್ತದ ಪರಿಹಾರ ಸಿಗಲಿದೆ. ಸುಮಾರು ಮೂರು ವರ್ಷಗಳಿಂದ ಬಾಕಿ ಇರುವ ವೇತನ ಪರಿಷ್ಕರಣೆಗೆ ಬ್ಯಾಂಕ್ ನಿರ್ವಹಣೆ ಮತ್ತು ಉದ್ಯೋಗಿ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ ಎಂಬುದು ಈಟಿವಿ ಭಾರತಗೆ ತಿಳಿದುಬಂದಿದೆ.
ಮುಂಬೈನಲ್ಲಿ ನಡೆದ ಜಂಟಿ ಸಭೆಯಲ್ಲಿ ಒಪ್ಪಂದ ಸೂತ್ರದ ಪ್ರಕಾರ, ವೇತನ ಮಸೂದೆಯಲ್ಲಿ ಶೇ.15ರಷ್ಟು ಸಂಬಳ ಹೆಚ್ಚಳಕ್ಕೆ ಬ್ಯಾಂಕ್ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಈ ಹೆಚ್ಚಳವು 2017ರ ನವೆಂಬರ್ 1ರಿಂದ ಅನ್ವಯ ಆಗುವಂತೆ ಜಾರಿಗೆ ಬರಲಿದೆ.
ಬಾಕಿ ಇರುವ ವೇತನ ಇತ್ಯರ್ಥ ಸಮಸ್ಯೆಯನ್ನು ಬಗೆಹರಿಸಲು ಮತ್ತು ತಿಳುವಳಿಕೆ ಪತ್ರಕ್ಕೆ (ಎಂಒಯು) ಅಂಗೀಕಾರ ಹಾಕಲಾಗಿದೆ. ವೇತನ ಪರಿಷ್ಕರಣೆಯು 2017ರ ನವೆಂಬರ್ 1ರಿಂದ ಅನ್ವಯಿಸುವಂತೆ ಅನುಷ್ಠಾನಕ್ಕೆ ಬರಲಿದೆ ಎಂದು ಐಬಿಎ ಪ್ರಕಟಣೆಯಲ್ಲಿ ತಿಳಿಸಿದೆ. ವೇತನ ಮತ್ತು ಭತ್ಯೆಗಳಲ್ಲಿನ ವಾರ್ಷಿಕ ಸಂಬಳ ಹೆಚ್ಚಳವನ್ನು 2017ರ ಮಾರ್ಚ್ 31ರ ವೇಳೆಯ ವೇತನ ಮಸೂದೆಯಲ್ಲಿ ಶೇ.15ರಷ್ಟು ಏರಿಸಲು ಒಪ್ಪಿಕೊಳ್ಳಲಾಗಿದೆ. ಪಾವತಿ ಘಟಕಗಳ ಮೇಲೆ 7,898 ಕೋಟಿ ರೂ.ಗಳಷ್ಟಿದೆ ಎಂದು ಹೇಳಿದೆ.
ಬ್ಯಾಂಕ್ ಸಿಬ್ಬಂದಿ ಮತ್ತು ನಿರ್ವಹಣೆಯ ಕೊನೆಯ ಜಂಟಿ ವೇತನ ಇತ್ಯರ್ಥವನ್ನು 2012ರಲ್ಲಿ ಅಂತಿಮಗೊಳಿಸಲಾಯಿತು. ಮುಂದಿನ ವೇತನ ಪರಿಷ್ಕರಣೆ ಇತ್ಯರ್ಥವು 2017ರ ನವೆಂಬರ್ ತಿಂಗಳಿಂದ ಬರಬೇಕಿತ್ತು. ಪ್ರತಿ 10 ವರ್ಷಗಳಿಗೊಮ್ಮೆ ರಚನೆಯಾಗುವ ಕೇಂದ್ರ ಸರ್ಕಾರಿ ನೌಕರರ ವೇತನ ಆಯೋಗಕ್ಕಿಂತ ಇದು ಭಿನ್ನವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೇತನ ಪರಿಷ್ಕರಣೆ ಪ್ರತಿ ಐದು ವರ್ಷಗಳಿಗೊಮ್ಮೆ ಸಂಧಾನದ ದ್ವಿಪಕ್ಷೀಯ ಒಪ್ಪಂದದ ಮೂಲಕ ಬ್ಯಾಂಕ್ ನೌಕಕರು ಮತ್ತು ಬ್ಯಾಂಕ್ ನಿರ್ವಾಹಕರ ನಡುವೆ ಭಾರತೀಯ ಬ್ಯಾಂಕ್ಗಳ ಸಂಘದಡಿ (ಐಬಿಎ) ನಡೆಯುತ್ತದೆ.
ನೌಕರರ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್) ಬ್ಯಾಂಕಿನ ಕೊಡುಗೆಯನ್ನು ಶೇ.10ರಿಂದ 14ರಷ್ಟಕ್ಕೆ ಹೆಚ್ಚಿಸಲು ಒಪ್ಪಿದ್ದಾರೆ. ಇದು ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದ ಮತ್ತು ಸರ್ಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ.