ಹೈದರಾಬಾದ್: ಭಾರತೀಯರಿಗೆ ಚಿನ್ನ ಮತ್ತು ಬೆಳ್ಳಿ ಅತ್ಯಮೂಲ್ಯ ಲೋಹಗಳು. ಹೂಡಿಕೆ ವಿಚಾರದಲ್ಲೂ ಈ ಲೋಹಗಳು ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಈಗಾಗಲೇ ಚಿನ್ನದ ಮೇಲಿನ ಇಟಿಎಫ್ (ವಿನಿಮಯ ವ್ಯಾಪಾರ ನಿಧಿ) ಜನರನ್ನು ಸಾಕಷ್ಟು ಆಕರ್ಷಿಸುತ್ತಿದೆ. ಇದರ ಜೊತೆಗೆ ಈಗ ಬೆಳ್ಳಿಯಲ್ಲೂ ನೀವು ಇಟಿಎಫ್ ಮೂಲಕ ಹೂಡಿಕೆ ಮಾಡುವುದು ಲಾಭದಾಯಕ ಎಂದು ಎನ್ನಿಸಿಕೊಳ್ಳುತ್ತಿದೆ.
ಆನ್ಲೈನ್ ಮೂಲಕವೇ ಖರೀದಿ ಮಾಡಿ, ಆನ್ಲೈನ್ನಲ್ಲೇ ಸಂಗ್ರಹಣೆ ಮಾಡುವುದು ಮಾತ್ರವಲ್ಲದೇ ಅನಿವಾರ್ಯವಾದಾಗ ಅಥವಾ ಬೆಲೆ ಹೆಚ್ಚಾದಾಗ ಮಾರುವುದೇ ಇಟಿಎಫ್ನ ಮೊದಲ ಲಕ್ಷಣ. ಇದು ಚಿನ್ನ ಮಾತ್ರವಲ್ಲದೇ, ಈಗ ಬೆಳ್ಳಿಯಲ್ಲೂ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಚಿನ್ನವನ್ನು ನೇರವಾಗಿ ಖರೀದಿ ಮಾಡದೇ, ಇಟಿಎಫ್ಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಕೆ ಮಾಡುವಂತೆ ಬೆಳ್ಳಿಯಲ್ಲೂ ಇಟಿಎಫ್ ಮೂಲಕ ಹೂಡಿಕೆ ಮಾಡಿ, ಲಾಭ ಗಳಿಕೆ ಮಾಡಬಹುದಾಗಿದೆ.
ಬೆಳ್ಳಿಗೆ ಏಕೆ ಹೆಚ್ಚು ಬೆಲೆ?:ಹೊಸ ತಂತ್ರಜ್ಞಾನಗಳಾದ 5ಜಿ, ಎಲೆಕ್ಟ್ರಿಕ್ ವಾಹನಗಳು ಮತ್ತು ಗ್ರೀನ್ ಎನರ್ಜಿಯಲ್ಲಿ ಬೆಳ್ಳಿಯನ್ನು ಉಪಯೋಗಿಸಲಾಗುತ್ತದೆ. ಹೊಸ ತಂತ್ರಜ್ಞಾನದಲ್ಲಿ ಇದರ ಬಳಕೆಯಲ್ಲಿ ಹೆಚ್ಚಾಗಲು ಕಾರಣವೆಂದರೆ ಬೆಳ್ಳಿ ಉತ್ತಮ ವಿದ್ಯುತ್ ವಾಹಕವಾಗಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಳ್ಳಿಯ ಮೇಲೆ ಹೂಡಿಕೆ ಮಾಡುವವರಿಗಾಗಿ ವೇದಿಕೆ ಒದಗಿಸಿಕೊಡಲು ಸೆಬಿ ಸಣ್ಣ ಹೂಡಿಕೆದಾರರಿಗೆ ಅವಕಾಶ ಒದಗಿಸಿದೆ.
ಬೆಳ್ಳಿಯ ಇಟಿಎಫ್ಗೆ ಸೆಪ್ಟೆಂಬರ್ 2021ರಂದು ಸೆಬಿ ಅನುಮತಿ ನೀಡಿದ್ದು, ನಂತರ ನವೆಂಬರ್ನಲ್ಲಿ ಹೊಸ ವಿಧಾನಗಳನ್ನು ಘೋಷಣೆ ಮಾಡಿದೆ. ಇದಕ್ಕೆ ಅನುಗುಣವಾಗಿ ಅನೇಕ ಕಂಪನಿಗಳು 2022ರ ಹೊಸ ವರ್ಷದಲ್ಲಿ ಸಿಲ್ವರ್ ಇಟಿಎಫ್‌ಗಳನ್ನು ಪ್ರಾರಂಭಿಸಲು ಸಿದ್ಧವಾಗಿವೆ.
ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್, ಐಸಿಐಸಿಐ ಸಿಲ್ವರ್ ಇಟಿಎಫ್ ಎಂಬ ಹೆಸರಿನಲ್ಲಿ ಫಂಡ್ ಅನ್ನು ಬಿಡುಗಡೆ ಮಾಡಿದೆ. ನೀವು ಅದರಲ್ಲಿ ಕನಿಷ್ಠ ನೂರು ರೂಪಾಯಿಯನ್ನು ಹೂಡಿಕೆ ಮಾಡಬಹುದು. ಈ ಹೊಸ ಆಫರ್ ಜನವರಿ 19ರವರೆಗೆ ಲಭ್ಯವಿರುತ್ತದೆ.
ಬೆಳ್ಳಿಯ ಮೇಲಿನ ಇಟಿಎಫ್ಗಳು ಶೇಕಡಾ 95ರಷ್ಟು ಹೂಡಿಕೆಯನ್ನು ಬೆಳ್ಳಿ ಮತ್ತು ಬೆಳ್ಳಿ ಸಂಬಂಧಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತವೆ. ನೀವು ಶೇಕಡಾ 99.9ರಷ್ಟು ಗುಣಮಟ್ಟ ಹೊಂದಿರುವ 30 ಕೆಜಿಯಷ್ಟು ಬೆಳ್ಳಿಯ ಬಾರ್ಗಳನ್ನು ಕೊಳ್ಳಬಹುದು. ಈ ಬೆಳ್ಳಿಯ ಗುಣಮಟ್ಟವನ್ನು ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್ ಪ್ರಮಾಣಿಕರಿಸಿರುತ್ತದೆ.