ಚಿಕ್ಕಮಗಳೂರು: ಮಲೆನಾಡಿನಲ್ಲಿ ಕೆಎಫ್ಡಿ ಮಂಗನ ಕಾಯಿಲೆಯ ವೈರಾಣು ಪತ್ತೆಯಾಗಿದ್ದು, ಜನರು ಜೀವಭಯದಿಂದ ಬದುಕುವ ವಾತವರಣ ನಿರ್ಮಾಣವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಮಲೆನಾಡಿನ ಭಾಗದಲ್ಲಿ ನಿಗೂಢವಾಗಿ ಸತ್ತ ಮಂಗಗಳಲ್ಲಿ ಕೆಎಫ್ಡಿ ವೈರಸ್ ಪತ್ತೆಯಾಗಿದ್ದು, ಸತ್ತ ಮಂಗಗಳ ರಕ್ತ ಪರೀಕ್ಷಾ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಮಂಗಗಳ ರಕ್ತವನ್ನು ಸಂಗ್ರಹಿಸಿ ವೈರಾಣು ಪತ್ತೆಗಾಗಿ ಪುಣೆ ಪ್ರಯೋಗಾಲಯಕ್ಕೆ ಸ್ಯಾಂಪಲ್ನ್ನು ಚಿಕ್ಕಮಗಳೂರಿನ ಅರೋಗ್ಯ ಇಲಾಖೆ ಕಳುಹಿಸಿಕೊಟ್ಟಿತ್ತು.
ಪುಣೆ ಪ್ರಯೋಗಾಲಯದಿಂದ ವರದಿ ಈಗ ಬಹಿರಂಗವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಎರಡೂ ಗ್ರಾಮಗಳಲ್ಲಿ ಕೆಎಫ್ಡಿ ವೈರಾಣು ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಹೇರೂರು ಮತ್ತು ಬಸರಿಕಟ್ಟೆಯಲ್ಲಿ ಸತ್ತಿದ್ದ ಮಂಗಗಳಲ್ಲಿ ಕೆಎಫ್ಡಿ ವೈರಾಣು ಪತ್ತೆಯಾಗಿರೋದು ಸಾಬೀತಾಗಿದೆ.
ಈ ಹಿಂದೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಂಗಗಳು ಸಾವನ್ನಪ್ಪುತ್ತಿದ್ದವು. ಇದರಿಂದ ಮಲೆನಾಡು ಜನತೆಯಲ್ಲಿ ಆತಂಕ ಮನೆ ಮಾಡಿತ್ತು. ಈಗ ವೈರಾಣು ಪತ್ತೆಯಿಂದ ಮಲೆನಾಡು ಜನರು ಮತ್ತೆ ಬೆಚ್ಚಿಬೀಳುವಂತೆ ಮಾಡಿದ್ದು, ಸರ್ಕಾರ ಈ ಕೂಡಲೇ ಇದರ ತೆಡೆಗೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಮಲೆನಾಡು ಜನರು ಒತ್ತಾಯಿಸಿದ್ದಾರೆ.