ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷೇಧವಿದ್ದರೂ ಕಾನೂನು ಉಲ್ಲಂಘಿಸುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಅಂತೆಯೇ ಕಳೆದ 6 ವರ್ಷದಲ್ಲಿ 1.31ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ದಂಡ ವಿಧಿಸಿದ್ದರಿಂದ, 2.62 ಕೋಟಿ ರೂ. ದಂಡ ವಸೂಲಾಗಿದೆ ಎಂದು ಕೆಎಸ್‌ಆರ್‌ಟಿಸಿ ನಿಗಮದ ಭದ್ರತಾ ಜಾಗೃತ ನಿರ್ದೇಶಕ ಪಿ.ಎಸ್.ಹರ್ಷ ತಿಳಿಸಿದರು.
ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ ಇಲ್ಲಿನ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಯುವ ಸಮೂಹ ಅದರ ವ್ಯಸನಿಗಳಾಗುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಸಂಸ್ಥೆಯು ತಂಬಾಕು ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ.ಪ್ರತಿ ದಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 1 ರಿಂದ 1.25 ಲಕ್ಷ ಜನ ಪ್ರಯಾಣಿಸುತ್ತಾರೆ. ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ, ಮಾರಾಟ, ಬಳಕೆಯನ್ನು ಸಂಪೂರ್ಣ ನಿಷೇಧಿಸಿಸಲಾಗಿದೆ. ಈ ಮೂಲಕ ಕಡಿವಾಣ ಹಾಕಲಾಗುತ್ತಿದೆ. ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿಯು ನಿಯಮ ಉಲ್ಲಂಘಿಸಿದಲ್ಲಿ 200 ರೂ. ದಂಡವನ್ನು ಸ್ಥಳದಲ್ಲಿಯೇ ವಿಧಿಸಲಾಗುತ್ತಿದೆ ಎಂದು ಹರ್ಷ ತಿಳಿಸಿದರು.
ದೇಶದ ಯಾವುದೇ ಸಾರಿಗೆ ನಿಗಮಗಳಲ್ಲಿ ಇಷ್ಟು ಕಟ್ಟುನಿಟ್ಟಾಗಿ ಧೂಮಪಾನ ನಿಷೇಧವನ್ನು ಜಾರಿಗೊಳಿಸಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.