ಬೆಂಗಳೂರು: ಲೋಕ ಸಮರದಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ 25ನ್ನು ಗೆದ್ದು ಬೀಗಿರುವ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿದೆ. ಇದರೊಂದಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುವ ಬಹಳಷ್ಟು ನಿರೀಕ್ಷೆಯಲ್ಲಿದ್ದ ಬಿಜೆಪಿಯ ಹಲವು ಆಕಾಂಕ್ಷಿಗಳಿಗೆ ತೀವ್ರ ನಿರಾಸೆಯಾಗಿದೆ ಎನ್ನಲಾಗ್ತಿದೆ.
ಕೇಂದ್ರ ಸರ್ಕಾದ ಸಚಿವ ಸ್ಥಾನದ ಆಕಾಂಕ್ಷಿಗಳು ಕರ್ನಾಟಕದ ಕೇವಲ ಮೂವರು ಸಂಸದರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಪದವಿ ದೊರೆತಿರುವುದು ಹಲವರ ಅಸಮಾಧಾನಕ್ಕೂ ಕಾರಣವಾಗಿದೆ. ಬೆಂಗಳೂರು ಉತ್ತರ ಸಂಸದ ಸದಾನಂದ ಗೌಡ ಎರಡನೇ ಬಾರಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸೋಲಿಲ್ಲದ ಸರದಾರ, ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿರುವ ಡಾ. ಉಮೇಶ್ ಜಾಧವ್ ಅವರಿಗೆ ಬಿಜೆಪಿ ಸೇರುವಾಗ ಸಚಿವ ಸ್ಥಾನ ನೀಡುವ ಭರವಸೆಯನ್ನು ಬಿಜೆಪಿ ವರಿಷ್ಠರು ನೀಡಿದ್ದರಂತೆ. ಆದರೆ, ಸಚಿವ ಸ್ಥಾನ ಸ್ವೀಕರಿಸುವವರ ಪಟ್ಟಿಯಲ್ಲಿ ಜಾಧವ್ ಹೆಸರು ಕೈಬಿಟ್ಟಿರುವುದು ಬೇಸರ ಉಂಟು ಮಾಡಿದೆ ಎನ್ನಲಾಗ್ತಿದೆ.
ತುಮಕೂರಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಮಣಿಸಿದ್ದ ಜಿ.ಎಸ್. ಬಸವರಾಜು ಅವರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನದ ನಿರೀಕ್ಷೆ ಇತ್ತಾದರೂ ನಿರಾಸೆಯುಂಟಾಗಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿರುವ ಅನಂತಕುಮಾರ ಹೆಗಡೆ ಅವರಿಗೂ ಸಚಿವ ಸ್ಥಾನ ಕೈತಪ್ಪಿದ್ದು ಹಲವರಿಗೆ ಶಾಕ್ ನೀಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮುಖಂಡ, ಹಿರಿಯ ನಾಯಕರಾಗಿರುವ ಶ್ರೀನಿವಾಸ ಪ್ರಸಾದ್ ಅವರಿಗೆ ಮತ್ತು ಚುನಾವಣೆಯಲ್ಲಿ ಪಕ್ಷದ ಬೆನ್ನೆಲುಬಾಗಿ ನಿಂತಿದ್ದ ಪ್ರಬಲ ಸಮುದಾಯದ ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ್, ಜಿ.ಎಸ್. ಬಸವರಾಜು, ಜಿ.ಎಂ. ಸಿದ್ದೇಶ್ವರ್ ಅವರ ನಿರೀಕ್ಷೆ ಸಹ ಹುಸಿಯಾಗಿದೆ.
ಕರ್ನಾಟಕ ಕೋಟಾದಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಸಚಿವ ಸ್ಥಾನ: ನೆರೆಯ ರಾಜ್ಯದವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ಕೋಟಾದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಜಯ ಸಾಧಿಸಿರುವ ಶೋಭಾ ಕರಂದ್ಲಾಜೆ ಅವರಿಗೂ ಸಹ ಯಾವುದೇ ಸ್ಥಾನ ಸಿಗದಿರುವುದು ಅವರಲ್ಲಿ ಬೇಸರ ಮೂಡಿಸಿದೆ ಎಂದು ಹೇಳಲಾಗ್ತಿದೆ.
ಬೆಳಗಾವಿ ಸಂಸದ ಸುರೇಶ್ ಅಂಗಡಿ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದ ಗೌಡ ಅವರು ಎರಡನೇ ಬಾರಿಗೆ ಸಚಿವ ಸ್ಥಾನಕ್ಕೇರಿದ್ದಾರೆ.