ಬೆಂಗಳೂರು: ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್)ಗಳಲ್ಲಿ ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳ ಕೊರತೆಯು ಎಫ್ಎಸ್ಎಲ್ ವರದಿ ವಿಳಂಬವಾಗುವುದಕ್ಕೆ ಕಾರಣವಾಗುತ್ತಿದೆ. ಇದು ಆರೋಪಿಗಳು ಖುಲಾಸೆಗೊಳ್ಳಲು ಪೂರಕವಾಗುತ್ತಿದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಕ್ರಿಮಿನಲ್ ಪ್ರಕರಣಗಳ ನ್ಯಾಯದಾನಕ್ಕೆ ಎಫ್ಎಸ್ಎಲ್ ಕೇಂದ್ರಗಳ ವಿಳಂಬ ವರದಿಗಳು ಗಂಭೀರ ಪರಿಣಾಮ ಉಂಟು ಮಾಡುತ್ತಿದೆ. ಈ ಕುರಿತು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿತು.
ಈ ಮೇರೆಗೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಲಯದ ಹಿಂದಿನ ಆದೇಶದಂತೆ ಕಾಲಮಿತಿಯಲ್ಲಿ ಖಾಲಿ ಹುದ್ದೆಗಳ ಭರ್ತಿ ಹಾಗೂ ಉಪಕರಣಗಳ ಖರೀದಿ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಪರಿಶೀಲಿಸಿದ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯ ಸರ್ಕಾರ ಹೀಗೆ ಇಷ್ಟು ದೀರ್ಘಾವಧಿಯ ಕಾಲಮಿತಿ ಹಾಕಿಕೊಂಡರೆ ಕಷ್ಟ. ಎಫ್ಎಸ್ಎಲ್ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸುವ ಕೆಲಸ ತ್ವರಿತವಾಗಿ ಆಗಬೇಕಿದೆ. ಸರ್ಕಾರ ಇಂತಹ ಕಾರ್ಯಗಳಿಗೆ ಸಂಪನ್ಮೂಲ ವ್ಯಯ ಮಾಡಲು ಮೀನಾಮೇಷ ಎಣಿಸಿದರೆ ಹೇಗೆ ಎಂದು ಕಟುವಾಗಿ ಪ್ರಶ್ನಿಸಿತು. ಅಲ್ಲದೆ, ಸರ್ಕಾರದ ಇಂತಹ ಕ್ರಮಗಳಿಂದಾಗಿಯೇ ಎಫ್ಎಸ್ಎಲ್‌ಗಳು ನೀಡುವ ವರದಿಗಳು ವಿಳಂಬವಾಗುತ್ತಿವೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆ ಕುಸಿಯುತ್ತಿದೆ, ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿತು.