ಉಡುಪಿ : 25 ವರ್ಷ ಪಕ್ಷಕ್ಕಾಗಿ ಮಣ್ಣು ಹೊತ್ತಿದ್ದೀನಿ. ಉಸಿರು ಇರೋ ತನಕವೂ ಪಕ್ಷದಲ್ಲಿ ಕೆಲಸ ಮಾಡ್ತೀನಿ. ಇಷ್ಟು ವರ್ಷ ಪುರುಷ ಸಂಸದರು ಮಾಡದ ಅಭಿವೃದ್ಧಿ ಕಾರ್ಯಗಳನ್ನು ಓರ್ವ ಮಹಿಳೆಯಾಗಿ ನಾನು ಮಾಡಿದ್ದೇನೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.
ನನಗೆ ಹಣಬಲ, ಜಾತಿ ಬಲ ಇಲ್ಲದೆ ಇರಬಹುದು. ಬಾಹುಬಲ ಇಲ್ಲದಿರಬಹುದು. ಬೆಂಬಲ ಕೊಡುವವರಿಲ್ಲದಿರಬಹುದು. ಮುಂಬರುವ ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳುವ ಯಾರೋ ಒಬ್ಬರು, ಕೆಲವರ ಮೂಲಕ ಅಪಪ್ರಚಾರ ಮಾಡಿಸುತ್ತಿರಬಹುದು. ಆದರೆ ಆ ಅಪಪ್ರಚಾರಗಳಿಗೆ ಹೆದರುವವಳು ನಾನಲ್ಲ ಎಂದು ಕರಂದ್ಲಾಜೆ ಸವಾಲು ಹಾಕಿದ್ದಾರೆ.
ಲೋಕಸಭಾ ಚುನಾವಣೆಗೆ ಮತ್ತೊಮ್ಮೆ ಶೋಭಾ ಕರಂದ್ಲಾಜೆ ಅಭ್ಯರ್ಥಿಯಾಗದಂತೆ ಜಿಲ್ಲೆಯಲ್ಲಿ ಗೋ ಬ್ಯಾಕ್ ಶೋಭಾ ಅಭಿಯಾನದ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ತಾನು ಸಂಸದೆಯಾಗಿ ಆಯ್ಕೆಯಾದ ಬಳಿಕ ಉಡುಪಿಗೆ ಪಾಸ್ಪೋರ್ಟ್ ಕೇಂದ್ರ ತಂದಿದ್ದೇನೆ. ರಾಜ್ಯದ ಏಕೈಕ ಸಖಿ ಸೆಂಟರ್ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಆರಂಭಿಸಿದ್ದು, ಎರಡು ಜಿಲ್ಲೆಗಳಲ್ಲಿ ಕೇಂದ್ರೀಯ ವಿದ್ಯಾಲಯ, ಉಡುಪಿಯಲ್ಲಿ ಜಿಟಿಡಿಸಿ ಕಟ್ಟಡ, ಕೌಶಲ್ಯ ತರಬೇತಿ ಕೇಂದ್ರ ನಿರ್ಮಾಣವಾಗಿದೆ. 550 ಕೋಟಿ ರೂಪಾಯಿ ಸಿಆರ್ಎಫ್ ಅನುದಾನ ಜಿಲ್ಲೆಗೆ ತರಲಾಗಿದ್ದು, ಎರಡು ಜಿಲ್ಲೆಯ ಎಲ್ಲಾ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ನನ್ನ ಅವಧಿಯಲ್ಲಿ ನಡೆದಿದೆ ಎಂದು ಶೋಭಾ ಹೇಳಿದ್ದಾರೆ.
ಓರ್ವ ಮಹಿಳಾ ಸಂಸದೆಯಾಗಿ ಇಷ್ಟೊಂದು ಅಭಿವೃದ್ಧಿಯನ್ನು ನಾನು ಮಾಡಿದ್ದು, ನನ್ನ ಮೊದಲು ಇದ್ದ ಪುರುಷ ಸಂಸದರು ಏನು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ತೋರಿಸಲಿ ಎಂದು ಸವಾಲು ಎಸೆದರು. ಈ ಮೂಲಕ ಮಾಜಿ ಸಂಸದ ಪ್ರಸ್ತುತ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಜಯಪ್ರಕಾಶ್ ಹೆಗ್ಡೆಯವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಇಷ್ಟು ವರ್ಷ ಪುರುಷ ಅಭ್ಯರ್ಥಿಗಳು ಈ ಕ್ಷೇತ್ರವನ್ನು ಪ್ರತಿನಿಧಿಸಿ ಏನು ಮಾಡಿದ್ದಾರೆ. ತನಗೆ ಟಿಕೆಟ್ ಕೇಳುವ ಭರದಲ್ಲಿ ಯಾರೋ ಒಬ್ಬರು ಅವಮಾನ ಮಾಡುತ್ತಿದ್ದಾರೆ. ನಾನು ಮತ್ತೆ ಇಲ್ಲಿ ಅಭ್ಯರ್ಥಿಯಾಗುವೆ ಎಂಬ ಆಸೆಗಾಗಿ ಇಷ್ಟೆಲ್ಲಾ ಅಭಿವೃದ್ಧಿ ಮಾಡಿಲ್ಲ. 10-20 ಹುಡುಗರ ಗುಂಪು ಕಟ್ಟಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಹೆದರುವ ಪ್ರಶ್ನೆಯೇ ಇಲ್ಲ. ನನ್ನ ವಿರುದ್ಧ ದನಿಯೆತ್ತಿದವರು ಬಿಜೆಪಿಗೆ ನೀಡಿದ ಕೊಡುಗೆಯೇನು ಎನ್ನುವುದು ಕೂಡ ಮುಖ್ಯವಾಗಿದೆ. ನಾನು ಬಿಜೆಪಿಗಾಗಿ ಕಳೆದ 25 ಕೆಲಸ ಮಾಡಿದ್ದೇನೆ. ಅಲ್ಲದೆ ರಾಜ್ಯಾದ್ಯಂತ ಒಡಾಡಿದ್ದೇನೆ. ಈಗ ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ. ನನ್ನ ವಿರುದ್ಧ ಅಪಪ್ರಚಾರ ಮಾಡುವವರು ಮೊದಲು ಅವರು ಬಿಜೆಪಿಗೆ ನೀಡಿದ ಕೊಡುಗೆಯೇನು ಎನ್ನುವುದರ ಕುರಿತು ನನ್ನ ಜೊತೆಗೆ ಚರ್ಚೆಗೆ ಬರಲಿ. ಮತ್ತೆ ಲೋಕಸಭೆಯ ಟಿಕೆಟ್ ಕೇಳಲಿ ಎಂದು ಹೆಸರು ಹೇಳದೆ ಜೆಪಿ ಹೆಗ್ಡೆಗೆ ಶೋಭಾ ಟಾಂಗ್ ನೀಡಿದರು.
ಏರ್ ಶೋ ಬೆಂಕಿ ಅವಘಡದ ಬಗ್ಗೆ ಏನಂತಾರೆ...
ಬೆಂಗಳೂರು ಏರ್ ಶೋ ಸ್ಥಳದಲ್ಲಿ ನಡೆದ ಬೆಂಕಿ ಅವಘಡದ ಕುರಿತು ಪ್ರತಿಕ್ರಿಯಿಸಿದ ಶೋಭಾ, ಏರ್ ಶೋ ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಿದ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮಕ್ಕೆ ರಕ್ಷಣೆ ಕೊಡಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಆರೋಪಿಸಿದ್ದಾರೆ.
ಏರ್ ಶೋಗೆ ದೇಶ- ವಿದೇಶದಿಂದ ಜನ ಬಂದಿದ್ದು, ರಾಜ್ಯ ಸರ್ಕಾರದ ಬೇಜವಾಬ್ದಾರಿ ಈ ಅವಘಡಕ್ಕೆ ಕಾರಣ. ಏರ್ ಶೋ ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವ ವೇಳೆ ನಾವು ದನಿ ಎತ್ತಿದ್ದೆವು. ಆದರೆ ಈಗ ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ರಾಜ್ಯ ಸರ್ಕಾರ ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸುವ ಕೆಲಸ ಮಾಡುತ್ತಿದೆ. ರಕ್ಷಣೆ ಕೊಡಲು ಸಾಧ್ಯವಾಗುವುದಿಲ್ಲ ಎಂದಾದರೆ ಅದರ ಅರ್ಥ ಏನು? ಪೊಲೀಸ್, ಅಗ್ನಿಶಾಮಕ ಇಲಾಖೆ ಏನು ಮಾಡುತ್ತಿದ್ದರು. ಕಾಶ್ಮೀರದ ಪುಲ್ವಾಮಾ ಘಟನೆಗೂ ಇದಕ್ಕೂ ಏನಾದರು ಲಿಂಕ್ ಇದೆಯಾ ಅಥವಾ ದೇಶದ್ರೋಹಿಗಳು ಈ ಕೃತ್ಯದಲ್ಲಿ ತೊಡಗಿರಬಹುದಾ ಎನ್ನುವುದರ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.