ಜೈಪುರ:15 ರ ಹರೆಯದಲ್ಲಿ ಸ್ಫೋಟಕ ಆಟವಾಡುತ್ತಿರುವ ಯುವ ಆಟಗಾರ್ತಿ ಶಫಾಲಿ ವರ್ಮಾ ಭವಿಷ್ಯ ಭಾರತ ತಂಡದ ಸೂಪರ್ ಸ್ಟಾರ್ ಆಗುತ್ತಾರೆಂದು ಇಂಗ್ಲೆಂಡ್ ತಂಡ ಆಟಗಾರ್ತಿ ಡೇನಿಯಲ್ ವ್ಯಾಟ್ ಅಭಿಪ್ರಾಯ ಪಟ್ಟಿದ್ದಾರೆ.
ನಿನ್ನೆ ನಡೆದ ಎರಡನೇ ಮಹಿಳಾ ಐಪಿಎಲ್ನಲ್ಲಿ ವೆಲೋಸಿಟಿ ತಂಡದ ಪರ ಆಡುತ್ತಿರುವ ಡೇನಿಯಲ್ ವ್ಯಾಟ್ ತಮ್ಮದೇ ತಂಡದ ಆಟಗಾರ್ತಿಯಾದ ಶಫಾಲಿ ವರ್ಮಾ ಕೇವಲ 15 ವರ್ಷದಲ್ಲಿ ಉತ್ತಮ ಬ್ಯಾಟಿಂಗ್ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದ್ದಾರೆ. ಪವರ್ ಪ್ಲೇ ನಲ್ಲಿ ಸರಾಗವಾಗಿ ರನ್ ಕಲೆಯಾಕುವ ಆಕೆ ಬಾಲನ್ನು ಸೂಕ್ಷ್ಮವಾಗಿ ಗಮನಿಸಿ ಬ್ಯಾಟಿಂಗ್ ನಡೆಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೆಟ್ಸ್ನಲ್ಲಿ ಅಭ್ಯಾಸ ಮಾಡುವಾಗ ಕೋಚ್ ಅ ಹುಡುಗಿಯ ವಯಸ್ಸು 15 ಎಂದಾಗ ನನಗೆ ಅಚ್ಚರಿಯಾಗಿತ್ತು. ಇಂತ ಚಿಕ್ಕವಯಸ್ಸಿನಲ್ಲೇ ಕಲಾತ್ಮಕ ಬ್ಯಾಟಿಂಗ್ ಕೌಶಲ್ಯ ರೂಡಿಸಿಕೊಂಡಿದ್ದಾರೆ. ಶಫಾಲಿ ಖಂಡಿತ ಭಾರತ ತಂಡಕ್ಕೆ ಭವಿಷ್ಯದಲ್ಲಿ ಮಂಧಾನ, ಹರ್ಮನ್ ಪ್ರೀತ್ ಕೌರ್ ರೀತಿ ಸೂಪರ್ ಸ್ಟಾರ್ ಆಗಲಿದ್ದಾರೆ ಎಂದು ಕೊಂಡಾಡಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಮಂಧಾನ ನೇತೃತ್ವದ ಟ್ರೈಬ್ಲೇಜರ್ ತಂಡವನ್ನು ಮಿಥಾಲಿ ನೇತೃತ್ವ ವೆಲೋಸಿಟಿ ತಂಡ 3 ವಿಕೆಟ್ಗಳಿಂದ ಮಣಿಸಿತ್ತು. ಈ ಪಂದ್ಯದಲ್ಲಿ ಆರಂಭಿಕರಾಗಿಳಿದಿದ್ದ ಶಫಾಲಿ 31 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಸಹಿತ 34 ರನ್ಗಳಿಸಿದ್ದರು. ವ್ಯಾಟ್ 35 ಎಸೆತಗಳಲ್ಲಿ 46 ರನ್ಗಳಿಸಿದರು. ಇವರ ಇನಿಂಗ್ಸ್ನಲ್ಲಿ 2 ಸಿಕ್ಸರ್ ಹಾಗೂ 5 ಬೌಂಡರಿ ಒಳಗೊಂಡಿತ್ತು.
ಭಾರತದಲ್ಲಿ ಮಹಿಳಾ ಕ್ರಿಕೆಟ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಬಿಸಿಸಿಐ ಟಿ20 ಚಾಲೆಂಜ್ಅನ್ನು ಆಯೋಜಿಸಿದ್ದು, ದೇಶಿಯ ಯುವ ಆಟಗಾರ್ತಿಯರಿಗೆ ತಮ್ಮ ಪ್ರದರ್ಶನ ತೋರುವುದಕ್ಕೆ ಉತ್ತಮ ವೇದಿಕೆಯಾಗಿದೆ. ಈ ಟೂರ್ನಿಯಲ್ಲಿ ಜಮೈಮಾ ರೋಡ್ರಗಸ್, ಶಫಾಲಿ ವರ್ಮಾರಂತಹ ಟೀನೇಜ್ ಆಟಗಾರ್ತಿಯರಿಗೆ ಹಿರಿಯ ಆಟಗಾರ್ತಿಯರಾದ ಮಿಥಾಲಿ, ಡೇನಿಯಲ್ ವ್ಯಾಟ್, ಸ್ಟೆಫನಿ ಟಾಯ್ಲರ್, ಸೋಫಿಯಾ ಡಿವೈನ್, ಸೀವರ್ ರಂತಹ ವಿಶ್ವಶ್ರೇಷ್ಠ ಆಟಗಾರ್ತಿಯರ ಮಾರ್ಗದರ್ಶನ ಸಿಗಲಿದೆ. ಇದರಿಂದ ಭವಿಷ್ಯದಲ್ಲಿ ಭಾರತ ತಂಡಕ್ಕೆ ಇಂತಹ ಟೂರ್ನಿಗಳಿಂದ ಉತ್ತಮ ಪ್ರತಿಭೆಗಳನ್ನು ಗುರುತಿಸಲು ಅನುಕೂಲವಾಗಲಿದೆ.