ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ತರಹೇವಾರಿ ಆಶ್ವಸನೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಪಕ್ಷದ ಪ್ರಣಾಳಿಕೆಯ ಅಂಶಗಳು ನಿಮ್ಮನ್ನು ಅಚ್ಚರಿಗೊಳಿಸುವುದಂತೂ ಸತ್ಯ.
ರಾಷ್ಟ್ರ ರಾಜಧಾನಿ ದೆಹಲಿಯ ಜನತೆಗೆ ಸಂಜಿ ವಿರಾಸತ್ ಪಾರ್ಟಿ ತಮ್ಮ ಪ್ರಣಾಳಿಕೆಯಲ್ಲಿ ಆಲ್ಕೋಹಾಲ್ಗೆ ಐವತ್ತು ಪ್ರತಿಶತ ಕಡಿತ, ಈದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಕುಟುಂಬಗಳಿಗೆ ಉಚಿವಾಗಿ ಮೇಕೆ ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.
ಸಂಜಿ ವಿರಾಸತ್ ಪಾರ್ಟಿಯ ಈಶಾನ್ಯ ದೆಹಲಿಯ ಅಭ್ಯರ್ಥಿ ಅಮಿತ್ ಶರ್ಮ ತಾವು ಚುನಾವಣೆಯಲ್ಲಿ ಗೆದ್ದರೆ ಪ್ರಣಾಳಿಕೆಯಲ್ಲಿರುವುದನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ.
ಉಳಿದಂತೆ ಪಿಹೆಚ್ಡಿವರೆಗೆ ಉಚಿತ ಶಿಕ್ಷಣ, ದೆಹಲಿಯ ವಿದ್ಯಾರ್ಥಿಗಳಿಗೆ ಮೆಟ್ರೋ ಹಾಗೂ ಬಸ್ಗಳಲ್ಲಿ ಉಚಿತ ಪ್ರಯಾಣ, ಉಚಿತ ರೇಷನ್, ಹೆಣ್ಣು ಮಗು ಜನಿಸಿದರೆ ಐವತ್ತು ಸಾವಿರ, ಹೆಣ್ಣು ಮಗಳ ಮದುವೆಗೆ ಎರಡೂವರೆ ಲಕ್ಷ ಧನ ಸಹಾಯ, ನಿರುದ್ಯೋಗಿಗಳಿಗೆ ತಿಂಗಳಿಗೆ ಹತ್ತು ಸಾವಿರ, ಹಿರಿಯ ನಾಗರಿಕರಿಗೆ, ವಿಧವೆ ಹಾಗೂ ವಿಶೇಷ ಚೇತನರಿಗೆ ಐದು ಸಾವಿರ ಮಾಸಾಶನ, ಖಾಸಗಿ ಆಸ್ಪತ್ರೆಗಳಲ್ಲಿ ಹತ್ತು ಲಕ್ಷದವರೆಗೆ ಉಚಿತ ವೈದ್ಯಕೀಯ ಸೇವೆ ನೀಡುವುದು ಸೇರಿದಂತೆ ಹತ್ತು ಹಲವಾರು ಆಶ್ವಾಸನೆಗಳು ಪ್ರಣಾಳಿಕೆಯಲ್ಲಿವೆ.
ದೆಹಲಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 16ರಿಂದ ಆರಂಭವಾಗಲಿದೆ. ಮೇ 12ರಂದು ಮತದಾನ ನಡೆಯಲಿದೆ.