ಲಂಡನ್:ಟೀಂ ಇಂಡಿಯಾ ಹಿರಿಯ ಆಟಗಾರ ಎಂ ಎಸ್ ಧೋನಿ ಧರಿಸಿದ್ದ ಬಲಿದಾನ್ ಲಾಂಛನವಿದ್ದ ಗ್ಲೌಸ್ ಬಗೆಗಿನ ವಿಚಾರ ಸಾಕಷ್ಟು ಸುದ್ದಿ ಮಾಡಿದ ವೇಳೆಯಲ್ಲೇ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಮ್ಮ ಪ್ರಧಾನಿ ಮುಂದೆ ಹೊಸದೊಂದು ಮನವಿ ಮಾಡಿಕೊಂಡಿದೆ.
ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಂದಿನ ಭಾನುವಾರ(ಜೂನ್ 16)ರಂದು ಮ್ಯಾಂಚೆಸ್ಟರ್ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಪಾಕ್ ಆಟಗಾರರು ವಿಕೆಟ್ ಕಿತ್ತು ವಿಶೇಷವಾಗಿ ಸಂಭ್ರಮಿಸುವ ಪ್ಲಾನ್ ಮಾಡಿಕೊಂಡಿದ್ದರು. ಈ ವಿಶೇಷ ಸಂಭ್ರಮಕ್ಕೆ ಅನುಮತಿ ನೀಡುವ ಸಲುವಾಗಿ ಆಟಗಾರರು ಬೋರ್ಡ್ ಮೂಲಕ ಪ್ರಧಾನಿ ಇಮ್ರಾನ್ ಖಾನ್ ಬಳಿ ಕೇಳಿಕೊಂಡಿದ್ದರು.
1992ರ ಫಲಿತಾಂಶ ಮತ್ತೆ ರಿಪೀಟ್, ಪಾಕ್ ಪಕ್ಕಾ ಚಾಂಪಿಯನ್ ಎನ್ನುತ್ತಿವೆ ಈ 4 ಅಂಶಗಳು!
ಬೋರ್ಡ್ ಮನವಿಯನ್ನು ತಿರಸ್ಕರಿಸಿರುವ ಪಾಕ್ ಪಿಎಂ, "ಆಟಗಾರರು ಗಮನವನ್ನು ಸಂಪೂರ್ಣವಾಗಿ ಆಟದ ಮೇಲೆ ಹರಿಸಲಿ. ಎಲ್ಲರೂ ಆಟವನ್ನು ಎಂಜಾಯ್ ಮಾಡಲಿ, ಬದಲಾಗಿ ಯಾವುದೇ ರೀತಿಯಲ್ಲಿ ಭಾವೋದ್ವೇಗಕ್ಕೆ ಒಳಗಾಗುವುದು ಬೇಡ. ಆಟದಲ್ಲಿ ರಾಜಕೀಯ ಸೇರುವುದು ಉತ್ತಮವಲ್ಲ. ಇದಲ್ಲದೆ ಟೀಂ ಇಂಡಿಯಾ ಪ್ರಸ್ತುತ ಬಲಿಷ್ಠ ತಂಡವಾಗಿದ್ದು ಹಗುರವಾಗಿ ಪರಿಗಣಿಸದಿರಿ" ಎಂದು ಖಡಕ್ಕಾಗಿ ಆಟಗಾರರಿಗೆ ತಿಳಿಸಿದ್ದಾರೆ.
ಟೀಂ ಇಂಡಿಯಾ ಇತ್ತೀಚೆಗೆ ಮುಕ್ತಾಯವಾದ ಆಸೀಸ್ ಸರಣಿಯಲ್ಲಿ ಸೇನೆ ವಿಶೇಷ ಗೌರವಾರ್ಥ ಸಲ್ಲಿಸುವ ಸಲುವಾಗಿ ಆರ್ಮಿ ಕ್ಯಾಪ್ ಧರಿಸಿ ಮೈದಾನಕ್ಕಿಳಿದಿತ್ತು. ಈ ನಡೆಯನ್ನು ಅಣಕಿಸುವ ರೀತಿಯಲ್ಲಿ ಸಂಭ್ರಮಿಸಲು ಸರ್ಫರಾಜ್ ನೇತೃತ್ವದ ಪಾಕಿಸ್ತಾನ ಪ್ಲಾನ್ ಮಾಡಿತ್ತು. ಪಾಕ್ ಪಿಎಂ ಈ ನಿರ್ಧಾರವನ್ನು ತಿರಸ್ಕರಿಸುವ ಮೂಲಕ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.